ಬ್ರಿಸ್ಬೇನ್ : ಬಿಗ್ ಬ್ಯಾಷ್ ಸೀಸನ್ 13ರ ಮೊದಲ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧ ಬ್ರಿಸ್ಬೇನ್ ಹೀಟ್ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಗಬ್ಬಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 2023 ಆವೃತ್ತಿಯ ಮೊದಲ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ 103 ರನ್‌ಗಳ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ ತಂಡ 20 ಓವರ್‌ಗಲ್ಲಿ 3 ವಿಕೆಟ್ ಕಳೆದುಕೊಂಡು 214ರನ್ ಬಾರಿಸಿತು. ಉತ್ತಮ ಆರಂಭದ ಜೊತೆಯಾಟವಾಡಿದ ಮನ್ರೋ ಮತ್ತು ನಾಯಕ ಉಸ್ಮಾನ್ ಖವಾಜ (28) ರನ್‌ಗಳಿಸಿ ನಿರ್ಗಮಿಸಿದರು. ಮಾರ್ನಸ್ ಲ್ಯಾಬುಶೇನ್ (30), ವಿಕೇಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ (18), ಮ್ಯಾಕ್ಸ್ ಬ್ರ್ಯಾಂಟ್ (15) ರನ್ ಗಳಿಸಿದರು. ಇತ್ತ ಸಂಯಮದಿಂದ ಆಟವಾಡಿದ ಕಾಲಿನ್ ಮನ್ರೋ 61 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಿತ 99 ಗಳಿಸಿ ನಾಟ್‌ಔಟ್ ಆಗಿ ಉಳಿದು ತಂಡ 214 ರನ್ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 1 ರನ್‌ಗಳಿಂದ ಶತಕ ವಂಚಿತರಾದರು.
ಮೆಲ್ಬೋರ್ನ್ ಪರ ನಾಯಕ ಮ್ಯಾಕ್ಸ್‌ವೆಲ್, ಪ್ಯಾರಿಸ್ ಮತ್ತು ಕೌಲ್ಟರ್-ಡಿ ನೈಲ್ ತಲಾ 1 ವಿಕೆಟ್ ಪಡೆದರು.
ಬೃಹತ್ ಮೊತ್ತ ಬೆನ್ನಟ್ಟಿದ ಮೆಲ್ಬೋರ್ನ್ ಸ್ಟಾರ್ಸ್‌ಗೆ ಆರಂಭಿಕ ಆಘಾತ ಉಂಟಾಯಿತು. ಥಾಮಸ್ ರೋಜರ್ಸ್ (1), ಸ್ಯಾಮ್ ಹಾರ್ಪರ್ (4) ಇಬ್ಬರು ಆರಂಭಿಕರು ಬೇಗನೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇದರೊಂದಿಗೆ ಮೆಲ್ಬೋರ್ನ್‌ನ ಪತನ ಆರಂಭವಾಯಿತು. ಬರ್ನ್ಸ್ (22) ಮತ್ತು ನಾಯಕ ಮ್ಯಾಕ್ಸ್‌ವೆಲ್ (23) ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ, ಸ್ವೀಪನ್ ಅವರ ಓವರ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿ ಸೇರಿದರು.
ಕಾರ್ಟ್‌ರೈಟ್ (33) ಪರಿಣಾಮಕಾರಿಯಾಗಿ ಬ್ಯಾಟ್ ಬೀಸಿದರು ಸಹಾ ತಂಡವನ್ನು ಗೆಲುವಿನತ್ತ ಕೊಂಡ್ಯೋಯ್ಯಲು ಸಾಧ್ಯವಾಗಲಿಲ್ಲ. ಬೇರಾವುದೇ ಆಟಗಾರರಿಂದ ನಿರೀಕ್ಷಿತ ಆಟ ಕಂಡು ಬರಲಿಲ್ಲ. ಬ್ರಿಸ್ಬೇನ್ ದಾಳಿಗೆ ನಲುಗಿದ ಮೆಲ್ಬೋರ್ನ್ ಕೇವಲ 15.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 111ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 103ರನ್ ಗಳ ಸೋಲು ಕಂಡಿತು.
ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬ್ರಿಸ್ಬೇನ್ ಪರ ಸ್ವೀಪನ್ 3, ಜೇವಿಯರ್ ಮತ್ತು ಮಿಚೆಲ್ ನೇಸರ್ ತಲಾ 2 ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ : ಕಾಲಿನ್ ಮನ್ರೋ