Mysore
27
broken clouds

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ಭಾರತ ವನಿತೆಯರಿಗೆ ಕೊನೆಯ ಪಂದ್ಯದಲ್ಲಿ ಶಾಕ್‌ ಕೊಟ್ಟ ಬಾಂಗ್ಲಾದೇಶ: ಟಿ20 ಸರಣಿ ಗೆದ್ದ ಭಾರತ

ಮೀರ್‌ಪುರ್‌: ಶಮೀಮಾ ಸುಲ್ತಾನಾ (42 ರನ್) ಬ್ಯಾಟಿಂಗ್ ಹಾಗೂ ರಬೇಯ ಖಾನ್ (16ಕ್ಕೆ 3) ಬೌಲಿಂಗ್‌ ಸಹಾಯದಿಂದ ಬಾಂಗ್ಲಾದೇಶ ವನಿತೆಯರು ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ 4 ವಿಕೆಟ್ ಗೆಲುವು ಸಾಧಿಸಿದ್ದಾರೆ. ಪಂದ್ಯ ಸೋತ ಹೊರತಾಗಿಯೂ ಹರ್ಮನ್‌ಪ್ರೀತ್ ಕೌರ್‌ ನಾಯಕತ್ವದ ಭಾರತ ತಂಡ, ಟಿ20 ಸರಣಿಯನ್ನು 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿದೆ.

ಇಲ್ಲಿನ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ಗುರುವಾರ ನಡೆದಿದ್ದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಬಾಂಗ್ಲಾ ಸ್ಪಿನ್ ಮೋಡಿಗೆ ನಲುಗಿ ತಮ್ಮ ಪಾಲಿನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಲಷ್ಟೇ ಶಕ್ತವಾಯಿತು. ಎರಡನೇ ಪಂದ್ಯದಲ್ಲಿ 95 ರನ್ ಸಾಧಾರಣ ಮೊತ್ತ ನಿಯಂತ್ರಿಸಿದ್ದ ಭಾರತದ ಬೌಲರ್‌ಗಳು ಅಂತಿಮ ಪಂದ್ಯದಲ್ಲಿಯೂ ಅದೇ ಪ್ರದರ್ಶನ ತೋರಲು ಪ್ರಯತ್ನಿಸಿದರು. ಆದರೂ 4 ವಿಕೆಟ್ ಸೋಲು ಒಪ್ಪಿಕೊಂಡರು.

ಹರ್ಮನ್‌ಪ್ರೀತ್ ಕೌರ್ ಅಬ್ಬರದ: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರು ಸ್ಫೋಟಕ ಆರಂಭ ಪಡೆದರೂ, ಎರಡನೇ ಓವರ್‌ನ ಮೊದಲ ಎಸೆತದಲ್ಲೇ ಸ್ಮೃತಿ ಮಂಧಾನಾ (ಒಂದು ರನ್), ಸುಲ್ತಾನಾ ಖಾತುನ್ ಬೌಲಿಂಗ್‌ನಲ್ಲಿ ಔಟಾದರು. ಮತ್ತೊಬ್ಬ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (11ರನ್, 1X4) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆ ಮೂಲಕ 20 ರನ್‌ಗಳಿಗೆ ಆರಂಭಿಕ ಆಟಗಾರರನ್ನು ಕಳೆದುಕೊಂಡ ಭಾರತ ಆಘಾತ ಅನುಭವಿಸಿತ್ತು.

ಮೂರನೇ ವಿಕೆಟ್‌ಗೆ ಜೆಮಿಮಾ ರೊಡ್ರಿಗಸ್ (28 ರನ್, 4X4) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (40ರನ್,3X4,1X6) 45 ರನ್‌ಗಳ ಜೊತೆಯಾಟವಾಡಿದರು. ಆ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. ಆದರೆ, ದೊಡ್ಡ ಹೊಡೆತಕ್ಕೆ ಕೈ ಹಾಕಿದ ಜೆಮಿಮಾ ರೊಡ್ರಿಗಸ್‌ ವಿಕೆಟ್ ಕೀಪರ್ ನೈಗರ್ ಸುಲ್ತಾನಾರ ಕೈಚಳಕಕ್ಕೆ ಸ್ಟಂಪ್ ಔಟ್ ಆದರು.

ಏಕಾಂಗಿ ಹೋರಾಟ ನಡೆಸಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಅರ್ಧಶತಕದ(40 ರನ್) ಅಂಚಿನಲ್ಲಿ ಫಾಹಿಮಾ ಖಾತುನ್‌ಗೆ ವಿಕೆಟ್ ಒಪ್ಪಿಸಿದರು. 6 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡ ಭಾರತ ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 102 ಅಲ್ಪಮೊತ್ತ ದಾಖಲಿಸಿತು. ಬಾಂಗ್ಲಾದೇಶ ಪರ ರಬೇಯಾ ಖಾನ್ (16ಕ್ಕೆ 3) ಉತ್ತಮ ಬೌಲರ್ ಎನಿಸಿಕೊಂಡರು.

ಬಾಂಗ್ಲಾಗೆ ಆಸರೆಯಾದ ಶಮೀಮಾ ಸುಲ್ತಾನಾ

103 ರನ್ ಗುರಿ ಹಿಂಬಾಲಿಸಿದ ಬಾಂಗ್ಲಾ ವನಿತೆಯರು ಮಿನ್ನು ಮಣಿ (28ಕ್ಕೆ 2) ಬೌಲಿಂಗ್ ದಾಳಿಗೆ ಸಿಲುಕಿ 16 ರನ್ ಆಗುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಏಕಾಂಗಿ ಹೋರಾಟ ನಡೆಸಿದ ಶಮೀಮಾ ಸುಲ್ತಾನಾ (42 ರನ್, 3X4)ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಆದರೆ ಮಿನ್ನು ಮಣಿ ಹಾಗೂ ಯಸ್ತಿಕಾ ಭಾಟಿಯಾ ಅವರ ಚುರುಕಿನ ಫೀಲ್ಡಿಂಗ್‌ಗೆ ಶಮೀಮಾ ವಿಕೆಟ್ ಒಪ್ಪಿಸಿದರು. ನದಿಯಾ ಅಕ್ತರ್ (10*, 1ಬೌಂಡರಿ)18.2 ಓವರ್‌ಗಳಲ್ಲೇ ಗೆಲುವಿನ ದಡ ಮುಟ್ಟಿಸಿದರು. ಭಾರತದ ಪರ ಮಿನ್ನು ಮಣಿ (28ಕ್ಕೆ2) ಹಾಗೂ ದೇವಿಕಾ ವಿದ್ಯಾ (16ಕ್ಕೆ 2) ಯಶಸ್ವಿ ಬೌಲರ್ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ಭಾರತ ವನಿತೆಯರು: 20 ಓವರ್‌ಗಳಲ್ಲಿ 102-9 (ಹರ್ಮನ್‌ಪ್ರೀತ್ ಕೌರ್ 40 ರನ್, ಜೆಮಿಮಾ ರೊಡ್ರಿಗಸ್ 28 ರನ್; ರಬೇಯಾ ಖಾನ್ 16ಕ್ಕೆ3)

ಬಾಂಗ್ಲಾದೇಶ ವನಿತೆಯರು:18.2 ಓವರ್‌ಗಳಲ್ಲಿ 103-6 (ಶಮೀಮಾ ಸುಲ್ತಾನಾ 42 ರನ್; ಮಿನ್ನು ಮಣಿ 28ಕ್ಕೆ2, ದೇವಿಕಾ ವಿದ್ಯಾ 16ಕ್ಕೆ 2)

ಪಂದ್ಯ ಶ್ರೇಷ್ಠ:ಶಮೀಮಾ ಸುಲ್ತಾನಾ

ಸರಣಿ ಶ್ರೇಷ್ಠ: ಹರ್ಮನ್‌ಪ್ರೀತ್ ಕೌರ್

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ