ಕೊಲಂಬೊ: ಗಾಲೆ ಟೈಟನ್ಸ್ ವಿರುದ್ಧದ ಲಂಕಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ಸ್ ತಂಡದ ಬ್ಯಾಟ್ಸ್‌ಮನ್ ಬಾಬರ್ ಆಝಮ್ ಶತಕ ಸಿಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಬರ್ ಆಝಮ್ ಅವರನ್ನು ಮದುವೆಯಾಗಬೇಕೆಂಬ ವಿಚಿತ್ರ ಬಯಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಜಿ ಮುಖ್ಯಸ್ಥ ರಮಿಝ್ ರಾಜಾ ಹೊರಹಾಕಿದ್ದಾರೆ.
ಸೋಮವಾರ ನಡೆದಿದ್ದ ಪಂದ್ಯದಲ್ಲಿ ಬಾಬರ್ ಆಝಮ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದರು. 59 ಎಸೆತಗಳನ್ನು ಎದುರಿಸಿದ ಬಾಬರ್ ಆಝಮ್, 5 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 104 ರನ್ ಸಿಡಿಸಿದರು. ಆ ಮೂಲಕ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಶತಕ ಬಾರಿಸಿದರು. ಇದರೊಂದಿಗೆ ಗಾಲೆ ನೀಡಿದ್ದ 189 ರನ್‌ಗಳ ಗುರಿಯನ್ನು ಕೊಲಂಬೊ ಸ್ಟ್ರೈಕರ್ಸ್ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ತಲುಪಿತು.
A performance to savour! Leading run scorer in @LPLT20 2023😍💜#TheBasnahiraBoys#HouseOfTigers #ColomboStrikers #LPL2023 #StrikeToConquer #BabarAzam pic.twitter.com/zUVlK2ac4Q
— Colombo Strikers (@ColomboStrikers) August 7, 2023
ಟಿ20 ಕ್ರಿಕೆಟ್‌ನಲ್ಲಿ 10ನೇ ಶತಕವನ್ನು ಪೂರ್ಣಗೊಳಿಸಿದ ಬಾಬರ್ ಆಝಮ್ ಅವರಿಗೆ ಅಭಿನಂದನೆಗಳನ್ನು ಅರ್ಪಿಸಿದ ರಮಿಝ್ ರಾಜಾ, ಇದೇ ವೇಳೆ ವಿಚಿತ್ರ ಬಯಕೆಯೊಂದನ್ನು ಹೊರಹಾಕಿದ್ದಾರೆ. ನಾನು ಬಾಬರ್ ಆಝಮ್ ಅವರನ್ನು ಮದುವೆಯಾಗಬೇಕೆಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
“ಭದ್ರತೆಯ ಅರ್ಧಶತಕ, ಕ್ಲಾಸ್, ಗುಣಮಟ್ಟ ಹಾಗೂ ಶಾಂತತೆ. ಕೊನೆಯವರೆಗೂ ನಿಮ್ಮನ್ನು ಕಾಪಾಡಲು ಬಾಬರ್ ಆಝಮ್ ಇದ್ದಾರೆ. ಇಂಥಾ ಸನ್ನಿವೇಶಗಳಲ್ಲಿ ಇವರು ಕಡ್ಡಾಯವಾಗಿ ಆಡುತ್ತಾರೆ. ಇವರನ್ನು ನಾನು ಪ್ರೀತಿಸುತ್ತಿದ್ದೇನೆ. ನಾನು ಇವರನ್ನು ಮದಿವೆಯಾಗಬೇಕು,” ಎಂಬ ರಮಿಜ್ ರಾಜಾ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಶೇಷ ದಾಖಲೆ ಬರೆದ ಬಾಬರ್ ಆಝಮ್
ಗಾಲೆ ಟೈಟನ್ಸ್ ವಿರುದ್ಧ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಪಾಕಿಸ್ತಾನ ನಾಯಕ ಬಾಬರ್ ಆಝಮ್ ಅವರು ಟಿ20 ಕ್ರಿಕೆಟ್‌ನಲ್ಲಿ 10 ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿರುವ ಬ್ಯಾಟ್ಸ್‌ಮನ್ ಸಾಲಿನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಈ ಸಾಲಿನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅಗ್ರ ಸ್ಥಾನದಲ್ಲಿದ್ದಾರೆ. ಸ್ವಂಘೋಷಿತ ಯೂನಿವರ್ಸ್ ಬಾಸ್ ಟಿ20 ಕ್ರಿಕೆಟ್‌ನಲ್ಲಿ 22 ಶತಕಗಳನ್ನು ಸಿಡಿಸಿದ್ದಾರೆ.
ಬಾಬರ್ ಆಝಮ್‌ಗೆ ಅಗ್ರ ಸ್ಥಾನ
ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬಾಬರ್ ಆಝಮ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಿಂದ 52.75 ಸರಾಸರಿ ಹಾಗೂ 147.55ರ ಸ್ಟ್ರೈಕ್‌ರೇಟ್‌ನಲ್ಲಿ 211 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಬಾಬರ್ ಅಝಮ್ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಬಾಬರ್ ಆಝಮ್ ಪ್ರತಿನಿಧಿಸುವ ಕೊಲಂಬೊ ಸ್ಟ್ರೈಕರ್ಸ್ ತಂಡ ಆಡಿರುವ 4 ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಪಡೆದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.