ಪ್ಯಾರಿಸ್: ಇಲ್ಲಿ ನಡೆಯುತ್ತಿರುವ ಒಲಂಪಿಕ್ಸ್ 2024ರ 3000 ಮೀ ಪುರುಷರ ಸ್ಟೀಪಲ್ಸ್ ಚೇಸ್ ಫೈನಲ್ಸ್‌ನಲ್ಲಿ ಭಾರತದ ಅವಿನಾಶ್ ಸಾಬಳೆ ಅವರು ಪದಕ ಪಡೆಯುವಲ್ಲಿ ವಿಫಲರಾಗಿದ್ದಾರೆ.
8 ನಿಮಿಷ 14.18 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿ 29 ವರ್ಷದ ಸಾಬಳೆ ಫೈನಲ್ ರೇಸ್‌ನಲ್ಲಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇನ್ನು ಮೊರಾಕ್ಕೋದ ಸೋಫಿಯನ್ ಅಲ್ ಬಕಾಲಿ 8 ನಿಮಿಷ, 06.05 ಸೆಕೆಂಡುಗಳಲ್ಲಿ ಗುರಿಮುಟ್ಟುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು. ಅಮೇರಿಕಾದ ಕೆನ್ನೆತ್ ರೂಕ್ಸ್ 8 ನಿಮಿಷ, 6.41 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೇ, 8 ನಿಮಿಷ 06.47 ಸೆಕೆಂಡುಗಳಲ್ಲಿ ಮೂರನೇಯವರಾಗಿ ಕಂಚಿನ ಪದಕ ಗೆದ್ದರು.
ಸ್ಟೀಪಲ್ ಚೇಸ್‌ನಲ್ಲಿ ಫೈನಲ್ಸ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವಿನಾಶ್ ಸಾಬಳೆ ಭಾರತಕ್ಕೆ ಪದಕ ತಂದುಕೊಡಲಿದ್ದಾರೆ ಎಂದು ನಂಬಲಾಗಿತ್ತು. ಆದರೆ ಫೈನಲ್ಸ್ ರೇಸ್‌ನಲ್ಲಿ ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡ ಸಾಬಳೆ ಬಳಿಕ ಹಿಂದುಳಿದರು. ಅದಾದ ಬಳಿಕ ಅವರು ಮುಂದೆ ಬರಲಿಲ್ಲ. ಅಂತಿಮವಾಗಿ ಸಾಬಳೆ 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಲಾಂಗ್ ಜಂಪ್: ಇತ್ತ ಲಾಂಗ್ ಜಂಪ್‌ನಲ್ಲಿ ಭಾರತ ಪರವಾಗಿ ಸ್ಪರ್ಧಿಸಿದ್ದ ಅಬ್ದುಲ್ಲಾ ಅಬೂಬಕ್ಕರ್, ಪ್ರವೀಣ್ ಚಿತ್ರವೇಲ್ ಅವರು ಫೈನಲ್ಸ್ ತಲುಪುವಲ್ಲಿ ವಿಫಲರಾಗಿದ್ದಾರೆ. ಒಟ್ಟು 32 ಜನ ಸ್ಪರ್ಧಿಗಳು ಸ್ಪರ್ಧಿಸಿದ್ದ ಈ ವಿಭಾಗದಲ್ಲಿ 16.49 ಮೀ ದೂರ ಜಿಗಿದ ಅಬ್ದುಲ್ಲಾ 21ನೇ ಸ್ಥಾನಕ್ಕೆ ತೃಪ್ತಿಪಟ್ಟರೇ, 16.25 ಮೀ ಜಿಗಿದ ಪ್ರವೀಣ್ 27ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರನಡೆದರು.