Mysore
20
overcast clouds
Light
Dark

ಏಷ್ಯನ್ ಗೇಮ್ಸ್| ಅರುಣಾಚಲ ಪ್ರದೇಶದ ಮೂವರು ವೂಶೂ ಆಟಗಾರ್ತಿಯರಿಗೆ ಚೀನಾ ಪ್ರವೇಶ ನಕಾರ: ಅನುರಾಗ್ ಠಾಕೂರ್ ಚೀನಾ ಪ್ರವಾಸ ರದ್ದು

ನವದೆಹಲಿ : ಏಷ್ಯನ್ ಗೇಮ್ಸ್‌ನಲ್ಲಿ ಅರುಣಾಚಲ ಪ್ರದೇಶದ ಮೂವರು ಅಥ್ಲೀಟ್‌ಗಳಿಗೆ ವೀಸಾ ಹಾಗೂ ಮಾನ್ಯತೆ ನಿರಾಕರಿಸಿರುವ ಚೀನಾದ ಕ್ರಮದ ವಿರುದ್ಧ ಪ್ರತಿಭಟನೆಯಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಚೀನಾ ಪ್ರವಾಸ ರದ್ದುಪಡಿಸಿದ್ದಾರೆ.

ವುಶು ಕ್ರೀಡೆಯ ಮೂವರು ಆಟಗಾರರಾದ ನ್ಯೆಮನ್ ವಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಮ್ಗು ಅವರಿಗೆ ಚೀನಾಕ್ಕೆ ಪ್ರವೇಶ ನೀಡಲು ನಿರಾಕರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸರ್ಕಾರ, ಅನುರಾಗ್ ಠಾಕೂರ್ ಅವರ ಚೀನಾ ಭೇಟಿಯನ್ನು ರದ್ದುಪಡಿಸಿದೆ.

ಭಾರತದ ವುಶು ತಂಡದ ಉಳಿದ ಏಳು ಮಂದಿ ಆಟಗಾರರು ಮತ್ತು ಸಿಬ್ಬಂದಿಯ ವೀಸಾಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅವರು ಹಾಂಕಾಂಗ್‌ಗೆ ತೆರಳಿ, ಅಲ್ಲಿಂದ ಚೀನಾದ ಹಾಂಗ್‌ಝೌ ವಿಮಾನ ಏರಿದ್ದಾರೆ. ಚೀನಾಕ್ಕೆ ಪ್ರಯಾಣಿಸಬೇಕಿದ್ದ ಅರುಣಾಚಲ ಪ್ರದೇಶದ ಮೂವರು ಆಟಗಾರರನ್ನು ದಿಲ್ಲಿಯ ಜವಹರಲಾಲ್ ನೆಹರೂ ಕ್ರೀಡಾಂಗಣದ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ಗೆ ಮರಳಿ ಕರೆತರಲಾಗಿದೆ.

“ಚೀನಾದ ಹಾಂಗ್‌ಝೌದಲ್ಲಿ 19ನೇ ಏಷ್ಯನ್ ಗೇಮ್ಸ್‌ಗೆ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾ ಅಧಿಕಾರಿಗಳು ಪೂರ್ವ ನಿರ್ಧಾರಿತ ಮತ್ತು ಉದ್ದೇಶಿತ ರೀತಿಯಲ್ಲಿ ತಾರತಮ್ಯ ಎಸಗಿರುವುದು ಭಾರತ ಸರ್ಕಾರಕ್ಕೆ ತಿಳಿದುಬಂದಿದೆ” ಎಂದು ಸರ್ಕಾರ ಶುಕ್ರವಾರ ತಿಳಿಸಿದೆ.

“ನಮ್ಮ ದೀರ್ಘಕಾಲದ ಮತ್ತು ಸ್ಥಿರ ನಿಲುವಿಗೆ ಪೂರಕವಾಗಿ ಭಾರತವು ಪ್ರಾದೇಶಿಕ ಅಥವಾ ಜನಾಂಗದ ಆಧಾರದಲ್ಲಿ ಭಾರತೀಯ ನಾಗರಿಕರನ್ನು ನಡೆಸಿಕೊಳ್ಳುವ ರೀತಿಯಲ್ಲಿ ತಾರತಮ್ಯ ಎಸಗುವುದನ್ನು ತಿರಸ್ಕರಿಸುತ್ತದೆ. ಅರುಣಾಚಲ ಪ್ರದೇಶವು ಈ ಹಿಂದೆ, ಈಗ ಮತ್ತು ಮುಂದೆ ಎಂದೆಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗವಾಗಿ ಇರುತ್ತದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

ಚೀನಾದ ಉದ್ದಟತನ

ಭಾರತದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮಾವೊ ನಿಂಗ್, “ಆತಿಥ್ಯ ವಹಿಸುವ ದೇಶವಾಗಿ ಚೀನಾವು ಎಲ್ಲಾ ದೇಶಗಳ ಕ್ರೀಡಾಪಟುಗಳು ಕಾನೂನುಬದ್ಧ ದಾಖಲೆಗಳೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಹಾಂಗ್‌ಝೌಗೆ ಬರುವುದನ್ನು ಚೀನಾ ಸ್ವಾಗತಿಸುತ್ತದೆ” ಎಂದಿದ್ದಾರೆ.

“ಹಾಗೆಯೇ ‘ಅರುಣಾಚಲ ಪ್ರದೇಶ’ ಎಂಬ ಜಾಗವನ್ನು ಚೀನಾ ಸರ್ಕಾರ ಪರಿಗಣಿಸುವುದಿಲ್ಲ. ಜಂಗ್ನಾನ್ ಚೀನಾ ಭೂಪ್ರದೇಶದ ಭಾಗ” ಎಂದು ನಿಂಗ್ ಹೇಳಿದ್ದಾರೆ. ಭಾರತದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿಲ್ಲ. ಆದರೆ ಪ್ರವಾಸ ದಾಖಲೆಗಳನ್ನು ನೀಡಿದ ಬಳಿಕ ಅವರೇ ಅದನ್ನು ಒಪ್ಪಿಕೊಂಡಿಲ್ಲ ಎಂದು ವಾದಿಸಿದ್ದಾರೆ.

“ಭಾರತದ ಈ ಅಥ್ಲೀಟ್‌ಗಳಿಗೆ ಚೀನಾ ಪ್ರವೇಶಿಸಲು ಈಗಾಗಲೇ ವೀಸಾ ದೊರಕಿದೆ. ಯಾವುದೇ ವೀಸಾವನ್ನು ಚೀನಾ ನಿರಾಕರಿಸಿಲ್ಲ. ದುರದೃಷ್ಟವಶಾತ್ ಅವರು ಈ ವೀಸಾವನ್ನು ಅಥ್ಲೀಟ್‌ಗಳು ಒಪ್ಪಿಕೊಂಡಿಲ್ಲ. ಚೀನಾದಲ್ಲಿ ಸ್ಪರ್ಧಿಸಲು ಪ್ರಮಾಣೀಕರಿಸಿದ ಅರ್ಹತೆ ಹೊಂದಿರುವ ಎಲ್ಲಾ ಅಥ್ಲೀಟ್‌ಗಳಿಗೂ ಅವಕಾಶ ನೀಡಲು ಚೀನಾ ಒಪ್ಪಿಕೊಂಡಿರುವುದರಿಂದ ಇದು ಒಸಿಎ ಸಮಸ್ಯೆ ಅಲ್ಲ” ಎಂದು ಏಷ್ಯಾ ಒಲಿಂಪಿಕ್ ಮಂಡಳಿ (ಒಸಿಎ) ನೀತಿ ಸಮಿತಿ ಅಧ್ಯಕ್ಷ ವೀ ಜಿಝಾಂಗ್ ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ