ಹೊಸದಿಲ್ಲಿ: ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ವಿಶ್ವ ಜೂನಿಯರ್ ಕುಸ್ತಿ ಚಾಂಪಿಯನ್‌ಷಿಪ್ ಮಹಿಳೆಯರ ೫೩ ಕೆ.ಜಿ. ವಿಭಾಗದಲ್ಲಿ ಭಾರತದ ಅಂತಿಮ್ ಪಂಗಾಲ್, ಐತಿಹಾಸಿಕ ಚಿನ್ನ ಸಾಧನೆ ಮಾಡಿದ್ದಾರೆ.
ಈ ಮೂಲಕ ಅಂಡರ್-೨೦ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತ ರನ್ನರ್-ಅಪ್: ಇದರೊಂದಿಗೆ ಭಾರತೀಯ ಜೂನಿಯರ್ ಮಹಿಳಾ ಕುಸ್ತಿ ತಂಡವು ಒಟ್ಟು ೧೬೦ ಅಂಕಗಳೊಂದಿಗೆ ರನ್ನರ್-ಅಪ್ ಟ್ರೋಫಿ ಮುಡಿಗೇರಿಸಿಕೊಂಡಿತು. ಜಪಾನ್ ೨೩೦ ಅಂಕಗಳೊಂದಿಗೆ ಮೊದಲನೇ ಹಾಗೂ ಅಮೆರಿಕ ೧೨೪ ಅಂಕಗಳೊಂದಿಗೆ ಮೂರನೇ ಸ್ಥಾನ ಜಯಿಸಿತು.
ಫೈನಲ್‌ನಲ್ಲಿ ಕಜಕಿಸ್ತಾನದ ಅಲ್ಟಿನ್ ಶಗಾಯೆವಾ ವಿರುದ್ಧ ೮-೦ ಅಂತರದ ಗೆಲುವು ದಾಖಲಿಸಿದ ಅಂತಿಮ್, ಇತಿಹಾಸ ಸೃಷ್ಟಿಸಿದರು. ಅರ್ಹತಾ ಸುತ್ತಿನಲ್ಲಿ ಜರ್ಮನಿಯ ಸ್ಪರ್ಧಿಯನ್ನು ೧೧-೦ ಅಂತರದಲ್ಲಿ ಮಣಿಸಿದ ಅಂತಿಮ್, ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಗ್ರಾಪ್ಲರ್‌ಗೆ ಆಘಾತ ನೀಡಿದರು. ಬಳಿಕ ಸೆಮಿಫೈನಲ್‌ನಲ್ಲಿ ಉಕ್ರೇನ್ ಸ್ಪರ್ಧಿಯ ವಿರುದ್ಧ ಮೇಲುಗೈ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದರು.
ಸೋನಂ, ಪ್ರಿಯಾಂಕಾಗೆ ಬೆಳ್ಳಿ
ಭಾರತದ ಪರ, ೬೨ ಕೆ.ಜಿ. ವಿಭಾಗದಲ್ಲಿ ಸೋನಂ ಮತ್ತು ೬೫ ಕೆ.ಜಿ. ವಿಭಾಗದಲ್ಲಿ ಪ್ರಿಯಾಂಕಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಹಾಗೆಯೇ ೫೭ ಕೆ.ಜಿ. ವಿಭಾಗದಲ್ಲಿ ಸಿಟೊ ಮತ್ತು ೭೨ ಕೆ.ಜಿ ವಿಭಾಗದಲ್ಲಿ ರಿತಿಕಾ ಕಂಚಿನ ಪದಕ ಜಯಿಸಿದರು.
- ಮಹಿಳೆಯರ ಕುಸ್ತಿ: ೫೩ ಕೆ.ಜಿ.ವಿಭಾಗ
- ಸೆಮಿಫೈನಲ್‌ನಲ್ಲಿ ಉಕ್ರೇನ್ ವಿರುದ್ಧ ಭಾರಿ ಗೆಲುವು
- ಫೈನಲ್‌ನಲ್ಲಿ ಕಜಕಿಸ್ತಾನ್ ವಿರುದ್ಧ ೮-೦ ಅಂತರದ ಜಯ
- ಅಂಡರ್-೨೦ಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ