ಬೆಂಗಳೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು, ಅದರ ಹಿನ್ನೆಲೆ ಇಂದು ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅವರು ಇಂದು ನಾಮಪತ್ರ ಸಲ್ಲಿಸಿದ್ದು ತಮ್ಮ ಆಸ್ತಿಯನ್ನು ಮೌಲ್ಯವನ್ನು ಘೋಷಿಸಿದ್ದಾರೆ. 598 ಕೋಟಿ ರೂಪಾಯಿಗೆ ಒಡೆಯರಾಗಿದ್ದಾರೆ ಡಿಕೆ ಸುರೇಶ್. ಕಳೆದ 5 ವರ್ಷದಲ್ಲಿ 259.19 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಜೊತೆಗೆ 207 ಕೋಟಿ ರೂಪಾಯಿ ಸಾಲವಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಕಿರಿಯ ಸಹೋದರ ಸುರೇಶ್ ಅವರು 2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ 339 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿರುವ ಅವರು ಪುನರಾಯ್ಕೆ ಬಯಸಿ ಇಂದು ಸಲ್ಲಿಸಿದ ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಬ್ಯಾಂಕ್‌ಗಳಲ್ಲಿ 16.61 ಕೋಟಿ ರೂಪಾಯಿ ಠೇವಣಿ ಹೊಂದಿದ್ದಾರೆ. 21 ಸ್ಥಳಗಳಲ್ಲಿ 32.76 ಕೋಟಿ ಮೌಲ್ಯದ ಕೃಷಿ ಭೂಮಿ, 210.47 ಕೋಟಿ ಮೌಲ್ಯದ 27 ಸ್ಥಳಗಳಲ್ಲಿ ಕೃಷಿಯೇತರ ಭೂಮಿ, 211.91 ಕೋಟಿ ಮೌಲ್ಯದ ಒಂಬತ್ತು ವಾಣಿಜ್ಯ ಕಟ್ಟಡಗಳು ಹಾಗೂ 27.13 ಕೋಟಿ ಮೌಲ್ಯದ ಮೂರು ವಸತಿ ಕಟ್ಟಡಗಳನ್ನು ಹೊಂದಿದ್ದಾರೆ. ಇನ್ನು ಡಿ.ಕೆ. ಸುರೇಶ್ ಸ್ವಂತ ಕಾರು ಹೊಂದಿಲ್ಲ. ಮನೆಯಲ್ಲಿ 70 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣವನ್ನು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.