ಹೊಸದಿಲ್ಲಿ: ತಮ್ಮ ಪುತ್ರನಿಗೆ ಈ ಬಾರಿಯ ಲೋಕಸಭೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗದ ಕಾರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಆಕ್ರೋಶಗೊಂಡು ಬಂಡಾಯ ಸಾರಿರುವ ಕೆ.ಎಸ್ ಈಶ್ವರಪ್ಪ ವಿರುದ್ಧ ಮೊನ್ನೆ ರಾಜ್ಯಕ್ಕೆ ಆಗಮಿಸಿದ್ದ ಅಮಿತ್ ಶಾಗೆ ದೂರನ್ನು ನೀಡಲಾಗಿತ್ತು.
ಇನ್ನು ಈಶ್ವರಪ್ಪ ಅವರನ್ನು ಭೇಟಿಯಾಗಲು ಅಮಿತ್ ಶಾ ತೀರ್ಮಾನಿಸಿದ್ದು, ನಿನ್ನೆ ( ಏಪ್ರಿಲ್ 3 ) ಭೇಟಿಯಾಗುವುದಾಗಿ ಸೂಚಿಸಿದ್ದರು. ಅದರಂತೆ ನಿನ್ನೆ ಸಂಜೆ ಈಶ್ವರಪ್ಪ ದೆಹಲಿ ತಲುಪಿದ್ದರು. ರಾತ್ರಿ 10ರ ಬಳಿಕ ಸಮಯ ನಿಗದಿಯಾಗಿತ್ತು ಎಂದು ಮೂಲಗಳು ತಿಳಿಸಿದ್ದವು.
ಆದರೆ ಬಳಿಕ ಅಮಿತ್ ಶಾ ಭೇಟಿಯಾಗುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು ಈಶ್ವರಪ್ಪ ಮಾಧ್ಯಮದವರ ಜತೆ ಮಾತನಾಡಿದ್ದಾರೆ. ʼಇಂದು ರಾತ್ರಿ 10 ಗಂಟೆಯ ಬಳಿಕ ಅಮಿತ್ ಶಾ ಅವರನ್ನು ಭೇಟಿಗೆ ಸಮಯ ನಿಗದಿಯಾಗಿತ್ತು. ಆದರೆ, ಅಮಿತ್ ಶಾ ಅವರು ಭೇಟಿಗೆ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಲೋಕಸಭೆ ಚುನಾವಣೆಯಲ್ಲಿ ಸೋಲಲಿ ಎನ್ನುವ ಅಪೇಕ್ಷೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇರಬಹುದುʼ ಎಂದು ಹೇಳಿಕೆ ನೀಡಿ ಶಿವಮೊಗ್ಗದಿಂದ ಸ್ಪರ್ಧೆ ಖಚಿತ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.