ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ವಿವಿಧ ರಾಜ್ಯಗಳು ತಮ್ಮ ನೆಲದ ವಿಶೇಷತೆಗಳನ್ನೊಳಗೊಂಡ ಸ್ತಬ್ಧಚಿತ್ರಗಳ ಪ್ರದರ್ಶನವನ್ನು ನವದೆಹಲಿಯಲ್ಲಿ ನಡೆಯುವ ಪರೇಡ್‌ನಲ್ಲಿ ಮಾಡುತ್ತವೆ. ಅದೇ ರೀತಿ ಕರ್ನಾಟಕ ಸಹ ಕಳೆದ 14 ವರ್ಷಗಳಿಂದ ಸ್ತಬ್ಧಚಿತ್ರ ಪ್ರದರ್ಶನವನ್ನು ಮಾಡುತ್ತಾ ಬಂದಿದ್ದ ಕರ್ನಾಟಕ 15ನೇ ಬಾರಿಗೆ ಸ್ತಬ್ಧಚಿತ್ರ ಪ್ರದರ್ಶನ ಮಾಡಲು ಸಿದ್ಧಗೊಂಡಿತ್ತು.
ಆದರೆ ರಕ್ಷಣಾ ಸಚಿವಾಲಯದ ಉಸ್ತುವಾರಿ ಕೇಂದ್ರ ಆಯ್ಕೆ ಸಮಿತಿಯು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅನುಮತಿಯನ್ನು ನಿರಾಕರಿಸಿದೆ. ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿವರ್ಷವೂ ಸ್ತಬ್ಧಚಿತ್ರವನ್ನು ಕಳುಹಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದಿದ್ದು, ಈ ಬಾರಿ ನಾಲ್ಕು ಪರಿಕಲ್ಪನೆಗಳನ್ನು ಕಳುಹಿಸಿಕೊಟ್ಟಿತ್ತು.
ಹೀಗೆ ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಳುಹಿಸಿದ್ದ ಬ್ರಾಂಡ್ ಬೆಂಗಳೂರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಹಾಗೂ ಅಣ್ಣಮ್ಮದೇವಿ ದೇವಸ್ಥಾನ ಈ ಎಲ್ಲಾ ಮಾದರಿಯನ್ನೂ ಸಹ ಕೇಂದ್ರ ತಿರಸ್ಕರಿಸಿದೆ. ಸದ್ಯ ಕನ್ನಡಿಗರು ರಕ್ಷಣಾ ಸಚಿವಾಲಯದ ಉಸ್ತುವಾರಿ ಕೇಂದ್ರ ಆಯ್ಕೆ ಸಮಿತಿ ನಿರ್ಧಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.





