Mysore
25
broken clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯ ಬಂಧನ!

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು 3 ರಾಜ್ಯಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಬಳಿಕ ಈ ಪ್ರಕರಣಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ದಾಳಿ ನಡೆಸಿದ ನಂತರ ಮುಝಮ್ಮಿಲ್ ಶರೀಫ್ ಎಂಬಾತನನ್ನು ಎನ್ಐಎ ಬಂಧಿಸಿದೆ. ಶರೀಫ್‌ನನ್ನು ಬೆಂಗಳೂರಿನಿಂದ ಕರೆದೊಯ್ದು ಸಹ ಸಂಚುಕೋರನೆಂದು ಪರಿಗಣಿಸಿ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಎನ್‌ಐಎ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯಲ್ಲಿರುವ ಜನನಿಬಿಡ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಮಾರ್ಚ್ 1 ರಂದು ಹ್ಯಾಂಡ್‌ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡ ನಂತರ ನೌಕರರು ಮತ್ತು ಗ್ರಾಹಕರು ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್ ಐಎ, ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್ ನನ್ನು ಈ ಹಿಂದೆ ಗುರುತಿಸಿತ್ತು. ಇತರ ಪ್ರಕರಣಗಳಲ್ಲಿ ಏಜೆನ್ಸಿಗೆ ಬೇಕಾಗಿರುವ ಮತ್ತೊಬ್ಬ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂಬಾತನನ್ನೂ ಅದು ಗುರುತಿಸಿತ್ತು. ಇಬ್ಬರೂ ಪರಾರಿಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ಪಿತೂರಿಯನ್ನು ಬಯಲಿಗೆಳೆಯಲು ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಕಾರ್ಯ ಪ್ರವೃತ್ತರಾಗಿದ್ದಾರೆ.

 

Tags: