ನವದೆಹಲಿ: ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಮುಂದಿನ ಸರ್ಕಾರ ರಚಿಸಲು ರಾಜ್ಯದ ಸಾರಿಗೆ ಸಚಿವ ಚಂಪೈ ಸೊರೆನ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಗುರುವಾರ ಸಂಜೆ ತಿಳಿದುಬಂದಿದೆ.
ಆದರೆ, ಸೊರೆನ್ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ರಾಧಾಕೃಷ್ಣನ್ ಅವರು ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ.
ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟದ 43 ಶಾಸಕರ ಬೆಂಬಲವನ್ನು ಹೊಂದಿರುವ ಚಂಪೈ ಸೊರೆನ್ ಅವರು ಇಂದು ಸಂಜೆ ರಾಂಚಿಯ ಅವರ ನಿವಾಸದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಹೊಸ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸುವಂತೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮನಿ ಲಾಂಡರಿಂಗ್ ಆರೋಪದ ಮೇಲೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕನನ್ನು ನಿನ್ನೆ ಸಂಜೆ ಜಾರಿ ನಿರ್ದೇಶನಾಲಯ ಬಂಧಿಸಿದ ನಂತರ ಸೊರೆನ್ ಅವರು ಹೇಮಂತ್ ಸೊರೆನ್ ಅವರ ಸ್ಥಾನವನ್ನು ತುಂಬಲಿದ್ದಾರೆ.