ರಾಜಸ್ಥಾನ : ಅಜ್ಮೀರ್ನ ಮದರ್ ರೈಲ್ವೆ ನಿಲ್ದಾಣದ ಬಳಿ ಸೂಪರ್ಫಾಸ್ಟ್ ರೈಲಿನ ನಾಲ್ಕು ಬೋಗಿಗಳು ಮತ್ತು ಎಂಜಿನ್ ಹಳಿ ತಪ್ಪಿದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ತಡರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಧಿಕಾರಿಗಳ ಪ್ರಕಾರ, ಸಬರಮತಿ-ಆಗ್ರಾ ಸೂಪರ್ಫಾಸ್ಟ್ ರೈಲಿನ ಎಂಜಿನ್ ಸೇರಿದಂತೆ ನಾಲ್ಕು ಬೋಗಿಗಳು ಮದರ್ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿವೆ. ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದವು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಹಲವಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಜ್ಮೀರ್ ನಿಲ್ದಾಣಕ್ಕೆ ಕರೆದೊಯ್ಯಲಾಗಿದೆ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ), ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಡಿಆರ್‌ಎಂ) ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿವೆ. ಹಳಿ ತಪ್ಪಿದ ಬೋಗಿಗಳು ಮತ್ತು ಎಂಜಿನ್ ಅನ್ನು ಮತ್ತೆ ಹಳಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ