ನವದೆಹಲಿ: ಇಂದು ( ಫೆಬ್ರವರಿ 10 ) ನಡೆದ ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿದ ಅಮಿತ್ ಶಾ ʼಪೌರತ್ವ ತಿದ್ದುಪಡಿ ಕಾಯ್ದೆಯನ್ನು ಲೋಕಸಭೆ ಚುನಾವಣೆಗೂ ಮುನ್ನವೇ ಜಾರಿಗೆ ಬರುತ್ತದೆ. ಇದರಲ್ಲಿ ಯಾವುದೇ ಗೊಂದಲ ಬೇಡʼ ಎಂದು ಹೇಳಿದರು.
ಇನ್ನೂ ಮುಂದುವರಿದು ಮಾತನಾಡಿದ ಅಮಿತ್ ಶಾ ಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆ ಎಂದರು. ʼಸಿಎಎ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಇತರೆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದೆ ಮತ್ತು ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಅದರಿಂದ ಕಾಂಗ್ರೆಸ್ ಹಿಂದೆ ಸರಿಯುತ್ತಿದೆʼ ಎಂದರು.
ಅಲ್ಲದೇ ʼಕಾಯಿದೆಯಲ್ಲಿ ಯಾವುದೇ ನಿಬಂಧನೆ ಇಲ್ಲದ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆಯು ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ಒದಗಿಸುವ ಕಾಯಿದೆಯಾಗಿದೆʼ ಎಂದು ಸ್ಪಷ್ಟನೆ ನೀಡಿದರು.