Mysore
28
few clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಯುವ ಜನತೆ ಮಾದಕ ವಸ್ತುಗಳ ಪಿಡುಗಿನಿಂದ ಸಂಪೂರ್ಣವಾಗಿ ಮುಕ್ತರಾಗಬೇಕು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಿ ‘ವಿಕಸಿತ ಭಾರತ’ವಾಗಿ ರೂಪುಗೊಳ್ಳಬೇಕಾದರೆ, ಯುವ ಜನತೆ ಮಾದಕ ವಸ್ತುಗಳ ಪಿಡುಗಿನಿಂದ ಸಂಪೂರ್ಣವಾಗಿ ಮುಕ್ತರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ತಮ್ಮ ಮಾಸಿಕ ಜನಪ್ರಿಯ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್’ನ 137ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಭವಿಷ್ಯವನ್ನು ಸುರಕ್ಷಿತವಾಗಿರಿಸುವುದು ಸರ್ಕಾರದ ಪ್ರಮುಖ ಸಂಕಲ್ಪಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಸರ್ಕಾರದ ವಿಕಸಿತ ಭಾರತಕ್ಕಾಗಿ ನಾಶ-ಮುಕ್ತ ಯುವ’ ಅಭಿಯಾನವನ್ನು ಶ್ಲಾಘಿಸಿದ ಪ್ರಧಾನಿಯವರು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಈ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾದಕ ವ್ಯಸನವು ಕೇವಲ ವ್ಯಕ್ತಿಯೊಬ್ಬರ ಆರೋಗ್ಯವನ್ನು ಮಾತ್ರವಲ್ಲದೆ, ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶಪಡಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿವಿಧ ಭಾಷೆಗಳಲ್ಲಿ ಮಾದಕ ವ್ಯಸನ ವಿರೋಧಿ ಸಂದೇಶಗಳನ್ನು ಬಿತ್ತರಿಸಲು ಹಾಗೂ ಜನಜಾಗೃತಿ ಮೂಡಿಸಲು ವಿಷಯ ರಚನೆಕಾರರಿಗೆ (ಕಂಟೆಂಟ್ ಕ್ರಿಯೇಟರ್ಸ್) ವಿಶೇಷ ಕರೆ ನೀಡಿದರು.
ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಹೇಳಿದರು. ವ್ಯಸನದ ವಿರುದ್ಧ ಜಾಗೃತಿ ಮೂಡಿಸುವವರು ಹಾಗೂ ವ್ಯಸನದಿಂದ ಹೊರಬರಲು ಹೋರಾಡುತ್ತಿರುವವರಿಗೆ ನೆರವಾಗುವವರನ್ನು ಅವರು ಶ್ಲಾಘಿಸಿದರು.

ಯುವಜನರಿಗೆ ಮಾದಕ ವಸ್ತುಗಳ ಅಪಾಯವನ್ನು ಮನವರಿಕೆ ಮಾಡಿಕೊಡುವಲ್ಲಿ ಸಾಮಾಜಿಕ ಮಾಧ್ಯಮದ ವಿಷಯ ರಚನೆಕಾರರು, ಶಿಕ್ಷಕರು, ಪೋಷಕರು, ಕಲಾವಿದರು ಮತ್ತು ಸ್ವಯಂಸೇವಾ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಕರೆ ನೀಡಿದರು. ವಿವಿಧ ಭಾರತೀಯ ಭಾಷೆಗಳಲ್ಲಿ ಜಾಗೃತಿ ಮೂಡಿಸುವ ಹಾಡುಗಳು, ಘೋಷಣೆಗಳು, ಕಿರುಚಿತ್ರಗಳು ಮತ್ತು ಬೀದಿ ನಾಟಕಗಳ ಮೂಲಕ ಸಂದೇಶವನ್ನು ತಲುಪಿಸುವ ಅಗತ್ಯವನ್ನೂ ಅವರು ಉಲ್ಲೇಖಿಸಿದರು.

ಆಗಸ್ಟ್ ತಿಂಗಳು ಭಾರತೀಯರಲ್ಲಿ ವಿಶೇಷ ದೇಶಭಕ್ತಿಯ ಭಾವನೆಯನ್ನು ತುಂಬುತ್ತದೆ ಎಂದು ಸ್ಮರಿಸಿದ ಪ್ರಧಾನಿ ಮೋದಿ, ರಾಷ್ಟ್ರೀಯ ಕೈಮಗ್ಗ ದಿನ, ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಬಾಹ್ಯಾಕಾಶ ದಿನ, ಕ್ವಿಟ್ ಇಂಡಿಯಾ ಚಳುವಳಿ ಹಾಗೂ ವಿಭಜನೆಯ ಭಯಾನಕ ಸ್ಮರಣಾರ್ಥ ದಿನಗಳ ಮಹತ್ವವನ್ನು ವಿವರಿಸಿದರು.

ಈ ವರ್ಷ ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವವಿರುವುದು ಈ ಬಾರಿಯ ಸ್ವಾತಂತ್ರ್ಯೋತ್ಸವದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಅಲ್ಲದೆ, ‘ಹರ್ ಘರ್ ತಿರಂಗಾ’ ಅಭಿಯಾನದ ಜೊತೆಗೆ ‘ಸೂರ್ಯಪಥ ತಿರಂಗ’ ಉಪಕ್ರಮದ ಮೂಲಕ ಭಾರತದ ತ್ರಿವರ್ಣ ಧ್ವಜವು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೆಮ್ಮೆಯಿಂದ ನುಡಿದರು.

ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ: ದೇಶಾದ್ಯಂತ ಇದುವರೆಗೆ 35 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದು ತಮ್ಮ ಸ್ವಂತ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಮಹಿಳೆಯರ ಆರ್ಥಿಕ ಪ್ರಗತಿಯು ಇಡೀ ಕುಟುಂಬದ ಉನ್ನತಿಗೆ ಬುನಾದಿಯಾಗುತ್ತದೆ ಎಂದರು.

ಉತ್ತರ ಪ್ರದೇಶದ ‘ಕ್ಲೀನ್-ಅಪ್ ಪಟ್ವಾಯಿ’ ಮಾದರಿಯಲ್ಲಿ ಯುವಕರು ಕೊಳಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿರುವಳನ್ನು ಪ್ರಶಂಸಿಸಿದರು. ವಿಶೇಷವಾಗಿ, ಶ್ರೀ ಅಮರನಾಥ ಜಿ ಯಾತ್ರೆಯ ಸಂದರ್ಭದಲ್ಲಿಯೂ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದ್ದು, ಯಾತ್ರೆಯಲ್ಲಿ ಬಳಸಿದ ಕುದುರೆ ಹಾಗೂ ಹೇಸರಗತ್ತೆಗಳ ಸಗಣಿಯನ್ನು ಜೈವಿಕ ಅನಿಲವಾಗಿ ಪರಿವರ್ತಿಸಿ, ಆ ಶುದ್ಧ ಶಕ್ತಿಯಿಂದ ‘ಸ್ವಚ್ಛ ಜ್ಯೋತಿ’ ಬೆಳಗಿಸಿರುವುದು ಪರಿಸರ ಸಂರಕ್ಷಣೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಬಣ್ಣಿಸಿದರು.

Tags:
error: Content is protected !!