ನವದೆಹಲಿ: ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಯಮುನಾ ನದಿ ನೀರನ್ನು ಕುಡಿಯಿರಿ, ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತೇನೆ ಎಂದು ಕಿಡಿಕಾರಿದ್ದಾರೆ.
ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಈ ಹಿಂದೆ ಅರವಿಂದ್ ಕೇಜ್ರಿವಾಲ್ ಹೇಳಿದ್ದ ಮಾತನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ ಅವರು, ನೀವು ಈಗಲೇ ಯಮುನಾ ನದಿಯಲ್ಲಿ ಮುಳುಗೇಳಿರಿ ಎಂದು ಸವಾಲು ಹಾಕಿದರು.
ಯಮುನಾ ನದಿ ಈಗಲೂ ಮಲಿನವಾಗಿದೆ. ಆ ನೀರನ್ನು ನೀವು ಒಮ್ಮೆ ಕುಡಿಯಿರಿ. ನಾನು ನಿಮ್ಮನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡುತ್ತೇನೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದರು.
ಇನ್ನು ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಸಿಎಂ ಆಗಿದ್ದ ವೇಳೆ ಹೊಸ ರಾಜಕೀಯ ವ್ಯವಸ್ಥೆಯನ್ನು ತಂದು, ಭ್ರಷ್ಟಾಚಾರವನ್ನು ಅಂತ್ಯಗೊಳಿಸುತ್ತೇನೆ ಎಂದು ಹೇಳಿದ್ದರು. ಐದು ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸಿ ಅದರಲ್ಲಿ ಮುಳುಗೇಳುತ್ತೇನೆ ಎಂದು ಅವರು ಭರವಸೆ ನೀಡಿದ್ದರು.