ಗಾಂಧಿನಗರ: ವಿಶ್ವ ವನ್ಯಜೀವಿ ದಿನದ ಅಂಗವಾಗಿ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜುನಾಗಢದ ಗಿರ್ ವನ್ಯಜೀವಿ ಅರಣ್ಯದಲ್ಲಿ ಸಿಂಹ ಸಫಾರಿ ನಡೆಸಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವಿಶ್ವ ವನ್ಯಜೀವಿ ದಿನದ ಸಲುವಾಗಿ ನಮ್ಮ ಗ್ರಹದ ಅದ್ಭುತ ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದು ಬರೆದುಕೊಂಡಿದ್ದಾರೆ.
ಪ್ರತಿಯೊಂದು ಪ್ರಭೇದವೂ ಕಾಡಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಂದಿನ ಪೀಳಿಗೆಗೆ ಅವುಗಳನ್ನು ನಾವೆಲ್ಲರೂ ಸೇರಿ ರಕ್ಷಿಸೋಣ. ವನ್ಯಜೀವಿಗಳನ್ನು ಸಂರಕ್ಷಿಸುವ ಸಲುವಾಗಿ ಭಾರತ ಕೈಗೊಂಡ ಕೊಡುಗೆಗಳ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಸಫಾರಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲ ಸಚಿವರು ಹಾಗೂ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು. ಈ ವೇಳೆ ಪ್ರಧಾನಿ ಮೋದಿ ಸಿಂಹಗಳ ಚಿತ್ರಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.





