ನವದೆಹಲಿ : ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ʼನಾರಿ ಶಕ್ತಿ ವಂದನ್ ಅಧಿನಿಯಮʼ ಮಸೂದೆ ಹಾಗೂ ಕ್ಷೇತ್ರಗಳ ಪುನರ್‌ವಿಂಗಡಣಾ ಆಯೋಗವನ್ನು ಸ್ಥಾಪಿಸುವ ಮಸೂದೆಗಳ ಮೇಲೆ ಲೋಕಸಭೆಯಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ ಎಂದು ಸ್ಪೀಕರ್ ಓಂ ಬಿರ್ಲಾ ಪ್ರಕಟಿಸಿದ್ದಾರೆ.
ಈ ಮಸೂದೆಗಳ ಕುರಿತು ಸುಮಾರು 15ರಿಂದ 18 ಗಂಟೆಗಳ ಕಾಲ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಗಳ ಮೇಲೆ 12 ಗಂಟೆಗಳ ಕಾಲ ಚರ್ಚೆ ನಡೆಸುವಂತೆ ಸಲಹೆ ನೀಡಿದ್ದರು.
ಇದಕ್ಕೂ ಮುನ್ನ ಮಹಿಳಾ ಮೀಸಲಾತಿ ತಿದ್ದುಪಡಿ ಹಾಗೂ ಕ್ಷೇತ್ರ ಮರುವಿಂಗಡಣಾ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಈ ವೇಳೆ ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದವು.
ಮಸೂದೆ ಜಾರಿಗೆ ಬಂದರೆ, ಲೋಕಸಭೆಯ 543 ಸ್ಥಾನಗಳಲ್ಲಿ ಸುಮಾರು 181 ಸ್ಥಾನಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆ ಇದೆ. ಅದೇ ರೀತಿ ರಾಜ್ಯ ವಿಧಾನಸಭೆಗಳಲ್ಲೂ ಮೀಸಲಾತಿ ಅನ್ವಯವಾಗಲಿದೆ.
ಮಸೂದೆಯ ಮೇಲಿನ ಚರ್ಚೆಯ ನಂತರ ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ.




