ಹೊಸದಿಲ್ಲಿ : ಕೇಂದ್ರ ಸರ್ಕಾರ 2026-27 ನೇ ಸಾಲಿಗೆ 17.2 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮಾರುಕಟ್ಟೆ ಸಾಲ 11.7 ಲಕ್ಷ ಕೋಟಿ ರೂ. ಹಾಗೂ ಸಣ್ಣ ಉಳಿತಾಯ ಮತ್ತು ಇತರ ಮೂಲಗಳ ಮೂಲಕ ಸರಿಸುಮಾರು 4 ಲಕ್ಷ ಕೋಟಿ ರೂ.ಗೂ ಅಧಿಕ ಸಾಲವನ್ನು ಪಡೆಯುವುದಾಗಿ ತಿಳಿಸಿದ್ದಾರೆ.
ಒಟ್ಟು 36.5 ಲಕ್ಷ ಕೋಟಿ ರೂ.ಗಳ ಸಾಲಯೇತರ ಸ್ವೀಕೃತಿಗಳು ಹಾಗೂ 53.5 ಲಕ್ಷ ಕೋಟಿ ರೂ.ಗಳನ್ನು ಅಂದಾಜಿಸಲಾಗಿದೆ. ತೆರಿಗೆ ಮೂಲಗಳಿಂದ 28.7 ಲಕ್ಷ ಕೋಟಿ ರೂ. ಆದಾಯ ಅಂದಾಜಿಸಲಾಗಿದೆ.
2026-27 ನೇ ಸಾಲಿಗೆ ಋಣೇತರ ಮೂಲಗಳಿಂದ 34 ಲಕ್ಷ ಕೋಟಿ ರೂ.ಸ್ವೀಕೃತಿ, 26.2 ಲಕ್ಷ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿತ್ತು. ಒಟ್ಟು ವೆಚ್ಚವನ್ನು 49.6 ಲಕ್ಷ ಕೋಟಿ ರೂ.ಗೆ ವಿಸ್ತರಿಸಲಾಗಿದೆ. ಇದರಲ್ಲಿ ಬಂಡವಾಳ ವೆಚ್ಚ 11 ಲಕ್ಷ ಕೋಟಿ ರೂ.ಗಳು ಎಂದು ನಿರ್ಮಲಾ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 16ನೇ ಹಣಕಾಸು ಆಯೋಗದ ವರದಿಯ ಶಿಫಾರಸುಗಳನ್ನು ಅಂಗೀಕರಿಸಿದ್ದು, ಅದನ್ನು ಆಧರಿಸಿ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ.ತೆರಿಗೆ ಹಂಚಿಕೆ ಮಾಡಿರುವುದಾಗಿ ತಿಳಿಸಿದರು.
2025 ನವೆಂಬರ್ 17ರಂದು 16ನೇ ಹಣಕಾಸು ಆಯೋಗ ತನ್ನ ವರದಿಯನ್ನು ರಾಷ್ಟ್ರ ಪತಿಯವರಿಗೆ ಸಲ್ಲಿಸಿದೆ. ಅದರ ಪ್ರಕಾರ ಸಂವಿಧಾನದ 281 ಕಲಂ ಅನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರ ಆಯೋಗದ ವರದಿಯನ್ನು ಮತ್ತು ಕಾರ್ಯಾನುಷ್ಠಾನ ಮಾಹಿತಿಯನ್ನು ಸಂಸತ್‌ನಲ್ಲಿ ಮಂಡಿಸಿದೆ ಎಂದು ತಿಳಿಸಿದ್ದಾರೆ.
ಆಯೋಗದ ಶಿಫಾರಸು ಆಧರಿಸಿ ಶೇ.41ರಷ್ಟು ತೆರಿಗೆ ವಿಕೇಂದ್ರೀಕರಣಕ್ಕೆ ಸಮ್ಮತಿಸಲಾಗಿದೆ. ಹೀಗಾಗಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿಪತ್ತು ನಿರ್ವಹಣೆಗಾಗಿ 1.4 ಲಕ್ಷ ಕೋಟಿ ರೂ. ಅನುದಾನ ಒದಗಿಸುತ್ತಿರುವುದಾಗಿ ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಸಾಲದ ಹೊರೆಯನ್ನು ಶೇ.50ರ ಪ್ರಮಾಣಕ್ಕೆ ತಗ್ಗಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸಾಲದ ಹೊರೆ ಶೇ.56.1ರಷ್ಟಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಅದನ್ನು 55.6ಕ್ಕೆ ಇಳಿಸಲಾಗುವುದು ಎಂದಿದ್ದಾರೆ.




