ಮುಂಬೈ: 2001ರಲ್ಲಿ ಮಹಾರಾಷ್ಟ್ರ ಮೂಲದ ಹೋಟೆಲ್ ಉದ್ಯಮಿ ಜಯಶೆಟ್ಟಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ಗೆ ಮುಂಬೈನ ವಿಶೇಷ ನ್ಯಾಯಾಲಯ ಇಂದು(ಮೇ.30) ಜೀವಾವಧಿ ಶಿಕ್ಷೆ ವಿಧಿಸಿದೆ.
ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಸ್ಥಾಪಿತವಾಗಿರುವ ನ್ಯಾಯಾಲಯದ ನ್ಯಾಯಾಧೀಶ ಎಂ.ಎಂ ಪಾಟೀಲ್ ಅವರು 23 ವರ್ಷಗಳ ಹಿಂದೆ ನಡೆದ ಹತ್ಯೆಗೆ ಸಂಬಂಧಿಸಿದಂತೆ ಛೋಟಾ ರಾಜನ್ ಅಪರಾಧಿ ಎಂದು ಘೋಷಿಸಿದ್ದಾರೆ.
ಕೊಲೆಯಾಗಿದ್ದ ಜಯಶೆಟ್ಟಿ ಪ್ರಸಿದ್ಧ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕನಾಗಿದ್ದ. 2001 ಮೇ 4ರ ರಾತ್ರಿ ಛೋಟಾ ರಾಜನ್ ಅವರ ಇಬ್ಬರು ಶೂಟರ್‌ಗಳು ಹೋಟೆಲ್ ಆವರಣದಲ್ಲಿ ಜಯಶೆಟ್ಟಿಯನ್ನು ಕೊಲೆ ಮಾಡಿದ್ದರು.
ಛೋಟಾ ರಾಜನ್ ಸಹಚರರಿಂದ ಸುಲಿಗೆ, ಬೆದರಿಕೆ ಕರೆಗಳು ಬರುತ್ತಿವೆ ಎಂದು ಜಯಶೆಟ್ಟಿ ದೂರು ನೀಡಿ, ಪೊಲೀಸ್ ಭದ್ರತೆಯನ್ನು ಸಹ ಪಡೆದಿದ್ದರು. ನಂತರ ಅವರು ಪೊಲೀಸ್ ಭದ್ರತೆಯನ್ನು ಹಿಂತಿರುಗಿಸಿದ್ದರು. ಭದ್ರತೆ ಹಿಂತೆಗೆದುಕೊಂಡ ಎರಡು ತಿಂಗಳ ನಂತರ ಅವರು ಹತ್ಯೆಯಾಗಿದ್ದರು.
ಛೋಟಾ ರಾಜನ್ ಪ್ರಸ್ತುತ ಪರ್ತಕರ್ತ ಜೆ.ಡೇ ಅವರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಿಹಾರ್ ಜೈಲಿನಲ್ಲಿದ್ದಾರೆ.