ಮಾಸ್ಕೊ : ರಷ್ಯಾ ನಡೆಸಿದ ಭೀಕರ ವಾಯುದಾಳಿಗೆ ಉಕ್ರೇನ್ ಪ್ರತಿದಾಳಿ ನಡೆಸಿದ್ದು, ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದಲ್ಲಿನ ಡ್ರುಜ್ಬಾ ತೈಲ ಪೈಪ್‌ಲೈನ್ ಮೇಲೆ ದಾಳಿ ಮಾಡಿದೆ. ಇದು ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಉಕ್ರೇನ್ ಸೇನಾಪಡೆಗಳು ತಿಳಿಸಿವೆ.
ಒಂದು ದಿನದ ಹಿಂದಷ್ಟೇ ರಷ್ಯಾ-ಉಕ್ರೇನ್ ಮೇಲೆ ಭೀಕರ ವಾಯುದಾಳಿ ನಡೆಸಿತ್ತು. ಬರೋಬ್ಬರಿ 800 ಡ್ರೋನ್, 4 ಖಂಡಾಂತರ ಕ್ಷಿಪಣಿ ಸೇರಿದಂತೆ 13 ಮಿಸೈಲ್‌ಗಳಿಂದ ದಾಳಿ ನಡೆಸಿತ್ತು. ಇದರಿಂದ ಕೈವ್‌ನ ಪೆಚೆರ್ಸ್ಕಿ ಆಡಳಿತ ಕಚೇರಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಮಿಲಿಟರಿ ಆಡಳಿತದ ಮುಖ್ಯಸ್ಥ ತಿಮರ್ ಟ್ಕಾಚೆಂಕೊ ಭಾನುವಾರ ತಿಳಿಸಿದ್ದಾರೆ. ಅಲ್ಲದೇ ರಷ್ಯಾದ ದಾಳಿಯಿಂದ ಸರ್ಕಾರಿ ಕಟ್ಟಡಗಳು ಹಾನಿಗೆ ಒಳಗಾಗಿರುವುದು ಇದೇ ಮೊದಲು ಎಂದೂ ಅವರು ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಷ್ಯಾ 800ಕ್ಕೂ ಹೆಚ್ಚು ಡ್ರೋನ್‌ಗಳು 13 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಖಚಿತಪಡಿಸಿದ್ದಾರೆ.
ಪ್ರತಿದಿನ, ನಮ್ಮ ಜನರು ಸಾಧ್ಯವಾದಷ್ಟು ಹೆಚ್ಚಿನ ಸೇವೆ ಮಾಡುತ್ತಿದ್ದಾರೆ. ಶತ್ರುಗಳ ದೌರ್ಬಲ್ಯ ಕಂಡುಕೊಂಡು, ಪ್ರತಿದಾಳಿ ನಡೆಸುತ್ತಿದ್ದಾರೆ. ಒಂದೆಡೆ ನಮ್ಮ ದೇಶವನ್ನು ಬಲಪಡಿಸುತ್ತಾ, ಮತ್ತೊಂದು ಕಡೆ ಆಕ್ರಮಣಕಾರರನ್ನ ದುರ್ಬಲಗೊಳಿಸುತ್ತಿದ್ದಾರೆ. ನಿಮ್ಮ ಧೈರ್ಯ, ಸಾಹಸ, ದೇಶ ಭಕ್ತಿಗೆ ಧನ್ಯವಾದಗಳು ಎಂದು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಇನ್ನೂ ರಷ್ಯಾದ ದಾಳಿಯಿಂದ ಕೈವ್‌ನಲ್ಲಿ ಒಂದು ಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳು ಹಾನಿಗೆ ಒಳಗಾಗಿದ್ದು, ಇದರಲ್ಲಿ ಸರ್ಕಾರಿ ಕಟ್ಟಡಗಳೂ ಸೇರಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.





