ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಡಿ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕೆಲ ಪರೀಕ್ಷಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಈ ಸಂದರ್ಭದಲ್ಲಿ ಅರ್ಜಿ ವಿಚಾರಣೆಗೆ ಪರಿಗಣಿಸುವುದು ಗೊಂದಲಕ್ಕೆ ಎಡೆ ಮಾಡಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆಗಸ್ಟ್.21ರಂದು ಸರ್ಕಾರ ಮರುಪರೀಕ್ಷೆ ನಡೆಸುತ್ತಿದೆ. ಹೀಗಾಗಿ ಸುಮಾರು 9 ಲಕ್ಷದಷ್ಟಿರುವ ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಇರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಈ ಸಂದರ್ಭದಲ್ಲಿ ಸುಪ್ರಿಂಕೋರ್ಟ್ ಮಧ್ಯಪ್ರವೇಶಿಸುವುದರಿಂದ ಗಂಭೀರ ಪರಿಣಾಮ ಉಂಟಾಗುತ್ತದೆ. ಎಲ್ಲೆಡೆ ಗೊಂದಲ ಮೂಡುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಜೂನ್.18ರಂದು ನಡೆದ ಪರೀಕ್ಷೆಯನ್ನು ಒಂದು ದಿನದ ನಂತರ ರದ್ದು ಮಾಡಲಾಗಿದೆ ಎಂದು ಪೀಠ ಹೇಳಿದೆ.
ಸದ್ಯ ನೆಟ್ ಮರು ಪರೀಕ್ಷೆ ಪ್ರಕ್ರಿಯೆ ಮುಂದುವರಿಯಲಿ. ಆ ಬಳಿಕ ಮುಂದಿನ ಕ್ರಮ ಎಂದು ಪೀಠ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಸಂಬಂಧ ಈ ಹಿಂದೆ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ್ದ ನ್ಯಾಯ ಪೀಠ, ಈ ಅರ್ಜಿಯನ್ನು ಒಬ್ಬ ವಕೀಲರು ಸಲ್ಲಿಸಿದ್ದಾರೆಯೇ ಹೊರತು ಸಂತ್ರಸ್ತ ಅಭ್ಯರ್ಥಿಗಳಲ್ಲ ಎಂದು ಹೇಳಿತ್ತು.





