ತಿರುವನಂತಪುರ: ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿರುವುದು ಸಾಂವಿಧಾನಿಕವಾಗಿ ಊರ್ಜಿತವಲ್ಲ. ಈ ನಿರ್ಧಾರ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ತಿರುವನಂತಪುರದಲ್ಲಿ ಇಂದು(ಫೆಬ್ರವರಿ.6) ನಡೆದ ಮಾತೃಭೂಮಿ ಅಂತರಾಷ್ಟ್ರೀಯ ಅಕ್ಷರಗಳ ಉತ್ಸವದ ಆರನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಪ್ರಸ್ತಾವನೆಯೂ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ. ಹೀಗಾಗಿ ಈ ನಿರ್ಧಾರ ಸಾಂವಿಧಾನಿಕವಾಗಿ ಊರ್ಜಿತವಲ್ಲ ಎಂದರು.
ಒಂದು ರಾಷ್ಟ್ರ, ಒಂದು ಚುನಾವಣೆಯ ಮೂಲಕ ದೇಶದಲ್ಲಿ ಚುನಾವಣೆ ನಡೆಸಿದಾಗ ಪಕ್ಷಾಂತರ ಅಥವಾ ಆತ್ಮವಿಶ್ವಾಸದ ನಿರ್ಣಯದಿಂದ ರಾಜ್ಯ ಸರ್ಕಾರ ಪತನವಾದರೆ, ಮುಂದಿನ ಲೋಕಸಭೆ ಚುನಾವಣೆ ನಡೆಯುವರೆಗೂ ಆಯಾಯ ರಾಜ್ಯಗಳು ಕಾಯಬೇಕಾಗುತ್ತದೆ. ಅಲ್ಲದೇ ಈ ತೀರ್ಮಾನದಿಂದ ಸಂವಿಧಾನದ 174ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ ಹಾಗೂ ಒಕ್ಕೂಟ ವ್ಯವಸ್ಥೆಯ ಮೂಲ ರಚನೆಯನ್ನು ಉಲ್ಲಂಘಿಸಲಾಗುತ್ತದೆ ಎಂದು ಹೇಳಿದರು.
ಇನ್ನೂ ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ತಮಿಳುನಾಡು ಮತ್ತು ಕೇರಳ ರಾಜ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.