ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಮನವಿ ಮೇರೆಗೆ ಅನಿರ್ದಿಷ್ಟಾವಧಿಗೆ ಕದನ ವಿರಾಮ ವಿಸ್ತರಣೆ ಮಾಡಿರುವುದಾಗಿ ಘೋಷಿಸಿದ್ದಾರೆ.
ಕದನ ವಿರಾಮಕ್ಕೆ ಈ ಹಿಂದೆ ಕೊಟ್ಟಿದ್ದ ಡೆಡ್ ಲೈನ್ ಮುಕ್ತಾಯಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಘೋಷಣೆ ಮಾಡಿದ್ದಾರೆ.
ಆದ್ರೆ ಹಾರ್ಮುಜ್ ಜಲಸಂಧಿ ದಿಗ್ಬಂಧನ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
7 ವಾರಗಳ ಯುದ್ಧದಲ್ಲಿ ಜನ ಮೃತಪಟ್ಟಿದ್ದು, ವಿಶ್ವದ ಆರ್ಥಿಕತೆ ಮೇಲೂ ದೊಡ್ಡ ಪೆಟ್ಟು ಬಿದ್ದಿದೆ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸಂಧಾನ ಮಾತುಕತೆಗೆ ಅಮೆರಿಕ ಮುಂದಾಗಿದೆ. ಸದ್ಯ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಟಂಪ್ ಹೇಳಿದ್ದೇನು?
ಕದನ ವಿರಾಮ ವಿಸ್ತರಣೆ ಬಗ್ಗೆ ಮಾತನಾಡಿರುವ ಟ್ರಂಪ್, ಪಾಕಿಸ್ತಾನದ ಮನವಿ ಸ್ವೀಕರಿಸಿ, ಅದರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿ, ಇರಾನ್ ನಾಯಕರು ಒಪ್ಪಂದಕ್ಕೆ ಮುಂದೆ ಬರುವವರೆಗೂ ದಾಳಿಯನ್ನ ತಡೆಯಲಾಗುವುದು ಎಂದಿದ್ದಾರೆ. ಇದೇ ವೇಳೆ ಇರಾನ್ ಬಂದರುಗಳಿಗೆ ದಿಗ್ಬಂಧನ ಹಾಕಿರುವ ಅಮೆರಿಕದ ನೌಕಾ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದಾರೆ.
ಇದಕ್ಕೆ ಇರಾನ್ ಪ್ರಮುಖ ನಾಯಕರು ತಕ್ಷಣದ ಪ್ರತಿಕ್ರಿಯೆ ಏನೂ ನೀಡಿಲ್ಲ. ಆದರೆ ಮಾಧ್ಯಮಗಳ ಪ್ರಕಾರ ಟೆಹ್ರಾನ್ ಕಡೆಯಿಂದ ಕದನ ವಿರಾಮಕ್ಕೆ ಯಾವುದೇ ಮನವಿ ಮಾಡಿರಲಿಲ್ಲ ಎಂದು ಹೇಳಿದೆ. ಇರಾನ್ ಜೊತೆಗಿನ ಸಂಧಾನ ಮುಗಿಯುವವರೆಗೆ ಕದನ ವಿರಾಮ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.





