ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ, ನಟ-ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ರಾಜಕೀಯ ಆಫರ್‌ಗಳು ಬರುತ್ತಿದೆ ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್ ತಿಳಿಸಿದ್ದಾರೆ.
ವಿಜಯ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರ ಜೊತೆಗೆ ಶೇ.50ರಷ್ಟು ಸ್ಥಾನಗಳು ಬಿಟ್ಟುಕೊಡುವ ಆಫರ್ ಬಂದಿದೆ. ಆದರೆ ಟಿವಿಕೆ ಈ ಆಫರ್‌ಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ ಎಂದಿದ್ದಾರೆ.
ವಿಜಯ್ ಯಾರಿಗೂ ಉಪಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ನಾವು ಯಾವುದೇ ಮೈತ್ರಿ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ. 234 ಸ್ಥಾನಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ” ಎಂದು ಘೋಷಿಸಿದ್ದಾರೆ. ಆದರೆ ಆಫರ್ ಮಾಡಿದ ಪಕ್ಷ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ.4ರಂದು ಫಲಿತಾಂಶ ಪ್ರಕಟವಾಗಲಿದೆ.




