ಚೆನ್ನೈ : ಮುಂಬರುವ 2026ರಲ್ಲಿ ತಮಿಳುನಾಡು ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರೇ ಎಂದು ಶುಕ್ರವಾರ ಅಧಿಕೃತವಾಗಿ ಘೊಷಿಸಲಾಗಿದೆ.
ಈ ವಿಶೇಷ ನಿರ್ಣಯವನ್ನು ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಗಿದೆ.
ಬಳಿಕ ಮಾತನಾಡಿದ ದಳಪತಿ ವಿಜಯ್, ಬಿಜೆಪಿ ಜೊತೆಗಿನ ಮೈತ್ರಿ ವದಂತಿಯನ್ನು ತಳ್ಳಿಹಾಕಿದ್ದಾರೆ. ಸೈದ್ಧಾಂತಿಕ ಶತ್ರು ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ನೇರ ಅಥವಾ ಪರೋಕ್ಷ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಸೈದ್ದಾಂತಿಕ ವಿರೋಧಿಯಾದ ಬಿಜೆಪಿ ಬೇರೆಲ್ಲಾದರೂ ವಿಷ ಬೀಜ ಬಿತ್ತಬಹುದು ಹೊರತು, ತಮಿಳುನಾಡಿನಲ್ಲಲ್ಲ. ನೀವು ಅಣ್ಣಾ ಮತ್ತು ಪೆರಿಯಾರ್ ಅವರನ್ನು ವಿರೋಧಿಸಿ ತಮಿಳುನಾಡಿನಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ದಳಪತಿ ವಿಜಯ್ ಟಿವಿಕೆ ಪಕ್ಷವು ಡಿಎಂಕೆ ಹಾಗೂ ಬಿಜೆಪಿ ಎರಡು ಪಕ್ಷವನ್ನು ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.





