ಪಟನಾ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜ್ಯದ ಯುವ ಜನತೆಗೆ 10 ಲಕ್ಷ ಉದ್ಯೋಗ ನೀಡುವುದಾಗಿ ಘೋಷಿಸಿದ್ದಕ್ಕೆ ಬೆಂಬಲ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಇಂದು (ಸೋಮವಾರ) ಉದ್ಯೋಗಾವಕಾಶಗಳನ್ನು ದುಪ್ಪಟ್ಟು ಮಾಡುವುದಾಗಿ ಘೋಷಿಸಿದ್ದಾರೆ. ಪಟನಾದ ಗಾಂಧಿ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್ ಕುಮಾರ್ ರಾಷ್ಟ್ರೀಯ ಜನತಾ ದಳ ಮತ್ತು ಜನತಾ ದಳ (ಯುನೈಟೆಡ್) ಸಮ್ಮಿಶ್ರ ಸರ್ಕಾರವು ಕನಿಷ್ಠ 10 ಲಕ್ಷ ಉದ್ಯೋಗ ಸೃಷ್ಠಿಯೊಂದಿಗೆ ವಿವಿಧ ವಲಯಗಳಲ್ಲಿ ಹೆಚ್ಚುವರಿ 10 ಲಕ್ಷ ಉದ್ಯೋಗಾವಕಾಶ ನೀಡಲಾಗುವುದು ಎಂದಿದ್ದಾರೆ. ರಾಜ್ಯದ ಮಕ್ಕಳಿಗಾಗಿ ನಾವು ಎಷ್ಟು ಸಾಧ್ಯವೋ ಅಷ್ಟು ಉದ್ಯೋಗ ಮತ್ತು ಉದ್ಯೋಗಾವಕಾಶಗಳನ್ನು ರಾಜ್ಯದ ಹೊರಗೆ ಮತ್ತು ಒಳಗೆ ಸೃಷ್ಟಿಸುತ್ತೇವೆ. ನಾವು ಇದರಲ್ಲಿ ಯಶಸ್ವಿಯಾದರೆ ಇದನ್ನು ನಾವು 20 ಲಕ್ಷಕ್ಕೆ ಏರಿಸಲಿದ್ದೇವೆ. ಇದನ್ನು ಈಡೇರಿಸಲು ನಾವು ಎಲ್ಲ ರೀತಿಯಲ್ಲಿಯೂ ಪ್ರಯತ್ನಿಸುತ್ತೇವೆ ಎಂದು ನಿತೀಶ್ ಹೇಳಿದ್ದಾರೆ.