Mysore
28
broken clouds

Social Media

ಭಾನುವಾರ, 19 ಏಪ್ರಿಲ 2026
Light
Dark

ತಮಿಳುನಾಡು | ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ; 20 ಮಂದಿ ಸಾವು, ಹಲವರು ಗಂಭೀರ

ವಿರುಧುನಗರ್ : ತಮಿಳುನಾಡಿನ ವಿರುಧುನಗರ್ ಜಿಲ್ಲೆಯ ಕಟ್ಟನಾರ್ ಪಟ್ಟಿ ಹಳ್ಳಿಯ ಸಮೀಪ ವನಜ್ ಪಟಾಕಿ ತಯಾರಿಕಾ ಘಟಕದಲ್ಲಿ ಭಾನುವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿ ನಾಲ್ಕು ಅಂತಸ್ತಿನ ಕಟ್ಟಡವೇ ಸಂಪೂರ್ಣವಾಗಿ ನೆಲಸಮವಾಗಿದೆ. ಈ ದುರಂತದಲ್ಲಿ ಕನಿಷ್ಠ 20 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಫ್ಯಾಕ್ಟರಿಯಲ್ಲಿ ಸುಮಾರು 150 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಯಿಂದಾಗಿ ಸುಮಾರು 5 ಕಿಲೋಮೀಟರ್ ದೂರದವರೆಗೂ ಸದ್ದು ಕೇಳಿಸಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಪಟಾಕಿ ತಯಾರಿಕೆಗೆ ಅಗತ್ಯವಾದ ರಸಾಯನಿಕಗಳ ಮಿಶ್ರಣದ ವೇಳೆ ಘರ್ಷಣೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ನಂತರ ತಕ್ಷಣವೇ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿಯನ್ನು ಹತೋಟಿಗೆ ತಂದವು. ಗಾಯಾಳುಗಳನ್ನು ವಿರುಧುನಗರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಮದುರೈ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಟ್ಟಡದ ಅಡಿಯಲ್ಲಿ ಇನ್ನೂ ಹಲವು ಮಂದಿ ಸಿಲುಕಿರುವ ಸಾಧ್ಯತೆ ಇದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಫ್ಯಾಕ್ಟರಿ ಮಾಲೀಕರು ಮತ್ತು ವ್ಯವಸ್ಥಾಪಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ನಂತರ ಮಾಲೀಕರು ಪರಾರಿಯಾಗಿದ್ದು, ತನಿಖೆ ಮುಂದುವರೆಯುತ್ತಿದೆ.

Tags:
error: Content is protected !!