ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಸ್ಪಾಡೆಕ್ಸ್ ಮಿಷನ್ ಉಡಾವಣೆ ಮಾಡುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಸ್ಪಾಡೆಕ್ಸ್ ಉಡಾವಣೆಯ ಪ್ರಯೋಗ ಒಂದು ವೇಳೆ ಯಶಸ್ವಿಯಾದರೆ ಆಯ್ದ ದೇಶಗಳ ಸಾಲಿನಲ್ಲಿ ಭಾರತ ಕೂಡ ನಿಂತು ಬೀಗಲಿದೆ.
ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಕಳೆದ ತಡರಾತ್ರಿ 10 ಗಂಟೆಯ ವೇಳೆಗೆ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಸ್ಪಾಡೆಕ್ಸ್ ಮಿಷನ್ ಉಡಾವಣೆ ಮಾಡಲಾಗಿದೆ. ಈ ಮಿಷನ್ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಒಂದು ಮೈಲಿಗಲ್ಲು ಎಂದು ಇಸ್ರೋ ಸಂತಸ ವ್ಯಕ್ತಪಡಿಸಿದೆ.
ಈ ಕಾರ್ಯಾಚರಣೆಯಲ್ಲಿ ಎರಡು ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಪರಸ್ಪರ ಜೋಡಿಸಲಾಗುತ್ತದೆ ಮತ್ತು ಬೇರ್ಪಡಿಸಲಾಗುತ್ತದೆ. ಒಂದು ವೇಳೆ ಈ ಮಿಷನ್ ಯಶಸ್ವಿಯಾದರೆ ಚಂದ್ರಯಾನ-4, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಮತ್ತು ಚಂದ್ರನ ಮೇಲೆ ಭಾರತೀಯ ಪ್ರಯಾಣಿಕನನ್ನು ಇರಿಸುವ ಭಾರತದ ಕನಸುಗಳನ್ನು ಈಡೇರಿಸುತ್ತದೆ ಎಂದು ಇಸ್ರೋ ತಿಳಿಸಿದೆ.
PSLV ರಾಕೆಟ್ ಬಾಹ್ಯಾಕಾಶ ನೌಕೆ A (SDX01) ಮತ್ತು ಸ್ಪೇಸ್ ಕ್ರಾಫ್ಟ್ B (SDX02) ಕಕ್ಷೆಯಲ್ಲಿ ಅವುಗಳನ್ನು ಐದು ಕಿಲೋಮೀಟರ್ ದೂರದಲ್ಲಿ ಇರಿಸುತ್ತದೆ. ನಂತರ ಇಸ್ರೋದ ವಿಜ್ಞಾನಿಗಳು ಅವುಗಳನ್ನು ಮೂರು ಮೀಟರ್ ಹತ್ತಿರ ತರಲು ಪ್ರಯತ್ನಿಸುತ್ತಾರೆ. ನಂತರ ಭೂಮಿಯಿಂದ ಸುಮಾರು 470 ಕಿಲೋಮೀಟರ್ ಎತ್ತರದಲ್ಲಿ ಒಂದಾಗಿ ವಿಲೀನಗೊಳಿಸುತ್ತಾರೆ. ಈ ಪ್ರಕ್ರಿಯೆಯನ್ನು ಡಾಕಿಂಗ್ ಎಂದು ಕರೆಯಲಾಗುತ್ತದೆ. ಈ ಎರಡೂ ಉಪಗ್ರಹಗಳನ್ನು ಬೇರ್ಪಡಿಸುವ ಕ್ರಿಯೆ ಆಗುತ್ತದೆ ಇದಕ್ಕೆ ಅನ್‌ಡಾಕಿಂಗ್ ಎಂದು ಕರೆಯಲಾಗುತ್ತದೆ.
ಈ ಮಿಷನ್ ಭವಿಷ್ಯದ ಮಾನವ ಸಹಿತ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಉಪಗ್ರಹ ಸೇವಾ ಕಾರ್ಯಾಚರಣೆಗಳಿಗೆ ನಿರ್ಣಾಯಕ ತಂತ್ರಜ್ಞಾನವಾಗಿದೆ. ಈ ಹಿಂದೆ ಅಮೆರಿಕಾ, ಚೀನಾ ಹಾಗೂ ರಷ್ಯಾ ಮಾತ್ರ ಈ ಸಾಧನೆ ಮಾಡಿವೆ.





