ಗುವಾಹತಿ/ನವದೆಹಲಿ: ದೇಶದ ಪ್ರತಿಯೊಂದು ಸಂಘ-ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ ಸಂಸದ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಹುಲ್ ಗಾಂಧಿ ಅವರು ಜನವರಿ.15ರಂದು ಕಾಂಗ್ರೆಸ್ ಪಕ್ಷದ ಹೊಸ ಕಚೇರಿಯನ್ನು ದೆಹಲಿಯ ಕೋಟ್ಲ ರಸ್ತೆಯಲ್ಲಿ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯೂ ದೇಶದಲ್ಲಿ ಎಲ್ಲಾ ಸಂಘ-ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಂಜೀತ್ ಚೇಟಿಯಾ ಎಂಬುವವರು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ್ವಯ ಅಸ್ಸಾಂ ರಾಜ್ಯದ ಗುವಾಹತಿಯ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ. ಇನ್ನೂ ರಾಹುಲ್ ಗಾಂಧಿ ಅವರ ಹೇಳಿಕೆಯೂ ದೇಶದ ಸಾರ್ವಭೌಮತ್ವ, ಏಕತೆ ಹಾಗೂ ಸಮಗ್ರತೆಗೆ ಅಪಾಯ ತರುವಂತಹ ಹೇಳಿಕೆಯಾಗಿದೆ. ಹೀಗಾಗಿ ಅವರ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 152 ಮತ್ತು 197(1) ಅಡಿ ಅನ್ವಯ ಎಫ್‌ಐಆರ್ ದಾಖಲಿಸಿದ್ದಾರೆ. ಈ ವಿಧಿಯೂ ಜಾಮೀಮು ರಹಿತ ಅಪರಾಧಕ್ಕೆ ಸಂಬಂಧಿಸಿದ ವಿಧಿಯಾಗಿದೆ.
ದೂರಿನಲ್ಲಿ ಏನಿದೆ?
ರಾಹುಲ್ ಗಾಂಧಿ ಅವರು ಅಂದು ನೀಡಿರುವ ಹೇಳಿಕೆಯೂ ಸ್ವೀಕಾರಾರ್ಹ ಮುಕ್ತ ವಾಕ್ ಸ್ವಾತಂತ್ರ್ಯದ ಗಡಿಯನ್ನು ಮೀರಿದ್ದಾಗಿದೆ. ಅಲ್ಲದೇ ಸಾರ್ವಜನಿಕ ವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.