ಪ್ರಯಾಗ್ ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಕೋಟ್ಯಾಂತರ ಜನರು ಪವಿತ್ರ ಸ್ನಾನ ಮಾಡಲು ಪ್ರಯಾಗ್ ರಾಜ್‌ಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತವಾಗಿದೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸೆಕ್ಟರ್-2ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಲ್ತುಳಿತ ಸಂಭವಿಸಿದ ಪರಿಣಾಮ ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೌನಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಇಂದು ಅಮೃತ ಸ್ನಾನ ಮಾಡುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕಾಲ್ತುಳಿತ ಸಂಭವಿಸಿದ ಪರಿಣಾಮ ಜನತೆ ತೀವ್ರ ಆತಂಕಕ್ಕೀಡಾಗಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು, ಸಂಗಮದ ಎಲ್ಲಾ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ. ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ. ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ.
ಆರೋಗ್ಯ ಸಮಸ್ಯೆ ಇರುವವರು ಬಹಳ ದೂರ ನಡೆಯಬೇಡಿ. ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರೂ ಅದು ಗಂಗಾ ನದಿಯ ನೀರು. ಮೌನಿ ಅಮಾವಾಸ್ಯೆ ಗಂಗಾ ಸ್ನಾನ ಪುಣ್ಯ ಪ್ರಾಪ್ತಿ ಮಾಡಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನಸ್ತೋಮ ಇರುವ ಹಿನ್ನೆಲೆ ಜನರು ಸಂಯಮದಿಂದ ವರ್ತಿಸಿ ಎಂದು ಮನವಿ ಮಾಡಿದರು.