ನವದೆಹಲಿ: ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ಸದಸ್ಯರು ಲೋಕಸಭೆಯಿಂದ ಕೆಲ ಕಾಲ ಸಭಾತ್ಯಾಗ ಮಾಡಿದರು.
ಲೋಕಸಭಾ ಸದನ ಪ್ರಾರಂಭಗೊಂಡು, ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ಆಸನದಿಂದ ಮೇಲೆದ್ದು ಹಿಂಸಾಚಾರದ ಕುರಿತು ಮಾತನಾಡುವಂತೆ ಆಗ್ರಹಿಸಿದರು.
ಹಿಂಸಾಚಾರ ಕುರಿತು ಸುದೀರ್ಘ ಚರ್ಚೆ ನಡೆಸುವಂತೆ ಸ್ಪೀಕರ್ ಓಂಬಿರ್ಲಾಗೆ ಮನವಿ ಮಾಡಿದರು.
ಇದು ತುಂಬಾ ಗಂಭೀರ ವಿಷಯ, ಈ ಹಿಂಸಾಚಾರದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಓಂಬಿರ್ಲಾ ಅವರು, ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಬಹುದು ಎಂದರು.
ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಿರೋಧ ಪಕ್ಷಗಳ ನಾಯಕರು ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಲೋಕಸಭೆಯಿಂದ ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಸದಸ್ಯರು ತಮ್ಮ ಆಸನದಿಂದ ಮೇಲೆದ್ದು ನಿಂತರೆ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪ್ರತಿಭಟನೆ ನಡೆಯುತ್ತಿದ್ದಂತೆ ಅಖಿಲೇಶ್ ಯಾದವ್ ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಬಳಿಗೆ ತೆರಳಿ ಚರ್ಚೆ ನಡೆಸುವಂತೆ ಕೋರಿದರು.
ಕೆಲ ಸಮಯದ ನಂತರ, ಲೋಕಸಭೆಯಿಂದ ಹೊರ ನಡೆಯುವಂತೆ ತಮ್ಮ ಪಕ್ಷದ ಸದಸ್ಯರು ಹಾಗೂ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರಿಗೆ ಅಖಿಲೇಶ್ ಯಾದವ್ ಸೂಚನೆ ನೀಡಿದರು. ಈ ವೇಳೆ ವಿರೋಧ ಪಕ್ಷಗಳು ಲೋಕಸಭೆಯಿಂದ ಸಭಾತ್ಯಾಗ ನಡೆಸಿದವು.
ನಂತರ, ಪ್ರಶ್ನೋತ್ತರ ಕಲಾಪದಲ್ಲಿ ಭಾಗವಹಿಸಲು ಲೋಕಸಭೆಗೆ ಮರಳಿದವು.