ಗುರುಗ್ರಾಮ: ಗುರುಗ್ರಾಮದಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಧಾರಾಕಾರ ಮಳೆಯಿಂದ ನಗರದ ರಸ್ತೆಗಳು ಮತ್ತು ಹೆದ್ದಾರಿಗಳೆಲ್ಲಾ ಸಂಪೂರ್ಣ ಬಂದ್ ಆಗಿದ್ದು, ಹಲವಾರು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.
ಇನ್ನು ಭರ್ಜರಿ ಮಳೆಯಾಗಿರುವ ಪರಿಣಾಮ ಗುರುಗ್ರಾಮ-ದೆಹಲಿ ಎಕ್ಸ್‌ಪ್ರೆಸ್ ವೇ ಸೇರಿದಂತೆ ಹಲವು ಪ್ರದೇಶಗಳು ಹಾಗೂ ಸುರಂಗ ಮಾರ್ಗಗಳಲ್ಲಿ ನೀರು ತುಂಬಿಕೊಂಡು ಪ್ರಯಾಣಿಕರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗುರುಗ್ರಾಮದ ಹಲವು ಬೀದಿಗಳು ಮಳೆಯಿಂದ ಜಲಾವೃತವಾಗಿದ್ದು, ಮೊಣಕಾಲುದ್ದ ನೀರು ಬಂದಿದೆ. ಪ್ರಯಾಣಿಕರು ಮೊಣಕಾಲುದ್ದ ತುಂಬಿರುವ ನೀರಿನಲ್ಲೇ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲು ನಗರದಾದ್ಯಂತ ತುರ್ತು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





