ಭುಜ್ (ಗುಜರಾತ್) : ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಪಾಕಿಸ್ತಾನಕ್ಕೆ ಬಿಡುಗಡೆ ಮಾಡಿರುವ ಹಣಕಾಸು ನೆರವಿನ ಬಗ್ಗೆ ವಿಶ್ವಸಂಸ್ಥೆ ನಿಗಾ ವಹಿಸಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿದರು.
ಗುರುವಾರವಷ್ಟೇ ಶ್ರೀನಗರದ ವಾಯುನೆಲೆಗೆ ಭೇಟಿ ಕೊಟ್ಟ ಬೆನ್ನಲ್ಲೇ ಶುಕ್ರವಾರ ಗುಜರಾತ್‍ನ ಭುಚ್ ವಾಯುನೆಲೆಯಲ್ಲಿ ಸೈನಿಕರನ್ನು ಭೇಟಿ ಮಾಡಿ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿದ ಸೇನಾಪಡೆಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ತಮ್ಮ ಭಾಷಣದಲ್ಲಿ ಭಾರತೀಯ ವಾಯುಪಡೆಯ ಸೈನಿಕರನ್ನು ಶ್ಲಾಘಿಸಿದ ಅವರು, ಸೇನಾ ಪಡೆಗೆ ಅಭಿನಂದನೆ ಸಲ್ಲಿಸಿದರು.
ಮುಂದುವರೆದು ಪಾಕಿಸ್ತಾನಕ್ಕೆ ಐಎಂಎಫ್ ವಿಸ್ತೃತ ನಿಧಿ ಸೌಲಭ್ಯ ಕಾರ್ಯಕ್ರಮದಡಿ 1,023 ಶತಕೋಟಿ ಅಮೆರಿಕನ್ ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವನ್ನು ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ಪುನಶ್ಚೇತನಕ್ಕೆ ಬಳಸಿಕೊಳ್ಳುತ್ತದೆ.
ಪಾಕ್ ಭಯೋತ್ಪಾದಕರ ಮೂಲ ಚಟುವಟಿಕೆಗಳಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯನ್ನು ಬಳಕೆ ಮಾಡುತ್ತಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದಿಂದ ಧ್ವಂಸಗೊಂಡಿರುವ ಉಗ್ರರ ಕಟ್ಟಡಗಳ ಪುನಶ್ಚೇತನಕ್ಕೆ ಹಣ ಬಳಕೆ ಮಾಡುತ್ತಿದೆ. ಆದ್ದರಿಂದ ವಿಶ್ವ ಸಮುದಾಯ ಈ ರಾಷ್ಟ್ರಕ್ಕೆ ಹಣ ಬಿಡುಗಡೆ ಮಾಡಿರುವ ಅದನ್ನು ಯಾವ ಉದ್ದೇಶಕ್ಕೆ ಬಳಸಿದ್ದೇವೆ ಎಂಬ ಬಗ್ಗೆ ಸ್ಪಷ್ಟನೆ ಕೇಳುವಂತೆ ಒತ್ತಾಯಿಸಿದರು.
ನೀವು ಹಣ ನೀಡುವುದರ ಬಗ್ಗೆ ನಮ ಆಕ್ಷೇಪವಿಲ್ಲ. ಅದು ಸದುದ್ದೇಶಕ್ಕೆ ಬಳಕೆಯಾಗಿದೆ ಎಂಬುದನ್ನು ಅವಲೋಕನ ಮಾಡಬೇಕು ಎಂದು ಮನವಿ ಮಾಡಿದರು.





