Mysore
20
clear sky

Social Media

ಗುರುವಾರ, 05 ಡಿಸೆಂಬರ್ 2024
Light
Dark

ಗೌತಮ್‌ ಅದಾನಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರು ತಮ್ಮ ಮೇಲಿರುವ ಆರೋಪಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಅವರನ್ನು ಕೇಂದ್ರ ಸರ್ಕಾರವೇ ರಕ್ಷಿಸುತ್ತಿದೆ ಎಂದು ಸಂಸದ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌತಮ್‌ ಅದಾನಿ ಅವರು ಸೌರಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್‌ ಡಾಲರ್‌ಗೂ ಅಧಿಕ ಲಂಚದ ಭರವಸೆಯನ್ನು ನೀಡಿದ್ದಾರೆ ಎಂಬ ಆರೋಪವನ್ನು ಸ್ವತಃ ಅದಾನಿ ಸಮೂಹವೇ ತಳ್ಳಿಹಾಕಿದೆ. ಇನ್ನು ಅದಾನಿ ಅವರು ತಪ್ಪು ಆರೋಪಗಳನ್ನು ಒಪ್ಪಿಕೊಳ್ಳುತ್ತಾರೆಂದು ಹೇಗೆ ಬಯಸುತ್ತಿರಾ? ಎಂದು ಪ್ರಶ್ನೆ ಮಾಡಿದರು. ಗೌತಮ್‌ ಅದಾನಿ ಖಂಡಿತವಾಗಿಯೂ ತಮ್ಮ ಮೇಲಿರುವ ಆರೋಪಗಳನ್ನು ನಿರಾಕರಿಸುತ್ತಾರೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಇನ್ನು ನಮ್ಮ ದೇಶದಲ್ಲಿ ಕೆಲವು ಸಣ್ಣ-ಪುಟ್ಟ ಆರೋಪಗಳಲ್ಲಿ ನೂರಾರು ಜನರನ್ನು ಬಂಧಿಸಲಾಗುತ್ತಿದೆ. ಆದರೆ ಒಬ್ಬ ಭಾರತೀಯ ಉದ್ಯಮಿ ಬಗ್ಗೆ ಅಮೆರಿಕಾ ದೇಶದಲ್ಲಿ ಸಾವಿರಾರು ಕೋಟಿ ರೂಪಾಯಿಯ ವಂಚನೆ ಕುರಿತು ಸಾವಿರಾರು ಪುಟಗಳ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಲಾಗಿದೆ. ಹೀಗಿದ್ದರೂ ನಮ್ಮ ಕೇಂದ್ರ ಸರ್ಕಾರ ಅವರನ್ನು ರಕ್ಷಿಸುತ್ತಿದ್ದು, ನ್ಯಾಯಯುತವಾಗಿ ಅವರು ಕಾರಾಗೃಹದಲ್ಲಿರಬೇಕು ಎಂದು ವಾಗ್ದಾಳಿ ನಡೆಸಿದರು.

Tags: