ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೇ ಚರ್ಚೆ ಕಾರ್ಯಕ್ರಮವನ್ನು ನಡೆಸಿದರು.
ಈ ವೇಳೆ ತಮ್ಮ ಶಾಲಾ ದಿನಗಳ ತಮಾಷೆಯ ಕಥೆಯನ್ನು ಹೇಳಿ, ಮಕ್ಕಳಿಗೆ ಗಣಿತವನ್ನು ನಿಭಾಯಿಸುವ ತಂತ್ರಗಳನ್ನು ಸಹ ಮೋದಿ ಕಲಿಸಿಕೊಟ್ಟರು.
ಪರೀಕ್ಷೆಯೇ ಜೀವನ ಎಂದು ಹೇಳಿದ ಪ್ರಧಾನಿ ಮೋದಿ ಅವರು, ಈ ಭಾವನೆಯೊಂದಿಗೆ ನಾವು ಬದುಕಲು ಸಾಧ್ಯವಿಲ್ಲ. ಮಕ್ಕಳ ಬೆಳವಣಿಗೆಗಾಗಿ ಅವರನ್ನು ಹೊರಗೆ ಕರೆದುಕೊಂಡು ಹೋಗುವುದು ಮುಖ್ಯ. ಅವರನ್ನು ಪುಸ್ತಕಗಳ ಸೆರೆಮನೆಯಲ್ಲಿ ಬಂಧಿಸಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತ್ರಿಪುರಾದ ವಿದ್ಯಾರ್ಥಿಯನ್ನು ನೋಡಿದ ಪ್ರಧಾನಿ ಮೋದಿ ಅವರು, ನೀವು ಇಲ್ಲಿಗೆ ಹೇಗೆ ಬಂದಿರಿ ಎಂದು ಕೇಳಿದರು. ಇಲ್ಲಿಗೆ ಬರಲು ಲಂಚ ಏನಾದರೂ ನೀಡಿದಿರಾ ಎಂದು ತಮಾಷೆಯಾಗಿ ಕೇಳಿದರು. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಯು ತ್ರಿಪುರಾದಲ್ಲಿ ಲಂಚ ಕೆಲಸ ಮಾಡುವುದಿಲ್ಲ ಎಂದು ಉತ್ತರಿಸಿದ್ದು ಅಚ್ಚರಿಯಾಗಿತ್ತು.
ಬಳಿಕ ಕಾರ್ಯಕ್ರಮದಲ್ಲಿ ಆಹಾರ ಪದ್ಧತಿ ಮತ್ತು ಫಿಟ್‌ನೆಸ್ ಬಗ್ಗೆ ಮಾತನಾಡಿದ ಅವರು, ರೈತರ ಉದಾಹರಣೆಗಳನ್ನು ನೀಡುವ ಮೂಲಕ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. ಅಲ್ಲದೇ ಮಕ್ಕಳು ತಮ್ಮ ಆಹಾರವನ್ನು 32 ಬಾರಿ ಅಗಿಯಬೇಕು. ಏನು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂಬುದನ್ನು ಸಹ ತಿಳಿದುಕೊಳ್ಳಬೇಕು ಎಂದು ಹೇಳಿದರು.





