ನವದೆಹಲಿ: ಉದ್ಯಮಿ ಗೌತಮ್ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ʼಮೋದಿ-ಅದಾನಿ ಭಾಯ್ ಭಾಯ್ʼ ಎಂದು ಬರೆದ ಕಪ್ಪು ಮಾಸ್ಕ್ ಧರಿಸಿ ಇಂದು ಸಹ ವಿರೋಧ ಪಕ್ಷದ ನಾಯಕರು ಸಂಸತ್ ಆವರಣದ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಸಂವಿಧಾನದ ಪ್ರತಿ ಹಿಡಿದು ಭಾಗವಹಿಸಿದರು. ಜೊತೆಯಲ್ಲಿ ʼಇಂಡಿಯಾʼ ಮೈತ್ರಿಕೂಟದ ಪಕ್ಷಗಳಾದ ಆರ್‌ಜೆಡಿ, ಜೆಎಂಎಂ ಸಂಸದರು ಕೂಡ ಪಾಲ್ಗೊಂಡಿದ್ದರು. ಆದರೆ ಟಿಎಂಸಿ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಪ್ರತಿಭಟನೆಯಿಂದ ದೂರವುಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿ ತುಂಬಾ ಹತ್ತಿರದ ಸ್ನೇಹಿತರು. ಗೌತಮ್ ಅದಾನಿ ಶ್ರೀಮಂತರ ಪಟ್ಟಯಲ್ಲಿ ಸ್ಥಾನಗಳಿಸುವಲ್ಲಿ ಮೋದಿಯವರ ಪಾತ್ರ ಇದೆ ಎಂದು ಗಂಭೀರ ಆರೋಪ ಮಾಡಿದರು.
ನಂತರ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ, ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಚರ್ಚಿಸಲು ಪ್ರಧಾನಿ ಮೋದಿ ಅವರು ಭಯಪಡುತ್ತಾರೆ ಎಂದು ಕಿಡಿಕಾರಿದರು. ಅಮೇರಿಕಾದಲ್ಲಿ ಅದಾನಿ ಮೇಲೆ ಆಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.