ಕುವೈತ್/ನವದೆಹಲಿ: 26ನೇ ಅರೇಬಿಯನ್ ಗಲ್ಫ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಕುವೈತ್ ದೊರೆ ಶೇಖ್ ಮಿಶಾಲ್ ಅಲ್ ಅಹ್ಮದ್ ಅಲ್-ಜಾಬಿರ್ ಅಲ್ ಸಬಾಹ್ ಅವರನ್ನು ಭೇಟಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸ ಕೈಗೊಂಡಿದ್ದು, ಈ ನಗರದ ಜಾಬಿರ್ ಅಲ್ ಅಹ್ಮದ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಡಿಸೆಂಬರ್.21 ರಂದು ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು, ಕುವೈತ್‌ನ ದೊರೆ ಜೊತೆಗಿರುವ ಭಾವಚಿತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಕುವೈತ್‌ನ ದೊರೆ ಶೇಖ್ ಮಿಶಾಲ್ ಅಲ್ ಅಹ್ಮದ್ ಅಲ್-ಜಾಬಿರ್ ಅಲ್‌ಸಬಾಹ್ ಅವರನ್ನು ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭೇಟಿ ಮಾಡಿರುವುದು ಸಂತಸದ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಗಣ್ಯರ ಭೇಟಿಯಿಂದ ಪರಸ್ಪರರ ನಡುವೆ ಅನೌಪಚಾರಿಕ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ತಿಳಿಸಿದೆ.
ಕುವೈತ್ ದ್ವೈವಾರ್ಷಿಕ ಅರೇಬಿಯನ್ ಗಲ್ಫ್ ಕಪ್ ಅನ್ನು ಆಯೋಜಿಸುತ್ತಾ ಬಂದಿದ್ದು, ಇದರಲ್ಲಿ ಜಿಸಿಸಿ ದೇಶಗಳಾದ ಇರಾಕ್ ಹಾಗೂ ಯೆಮನ್ ಸೇರಿದಂತೆ ಒಟ್ಟು ಎಂಟು ದೇಶಗಳು ಗಲ್ಫ್ ಕಪ್ ಗೇಮ್‌ನಲ್ಲಿ ಭಾಗವಹಿಸುತ್ತಿವೆ.