ಬೀಜಿಂಗ್: ಕೋವಿಡ್ ವೈರಸ್‌ನಿಂದ ಸುಧಾರಿಸಿಕೊಳ್ಳುವ ಮುನ್ನವೇ ನೆರೆಯ ದೇಶ ಚೀನಾದಲ್ಲಿ ಮತ್ತೊಂದು ನಿಗೂಢ ವೈರಾಣು ಪತ್ತೆಯಾಗಿದ್ದು, ಜನತೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಹ್ಯೂಮನ್ ಮೆಟಾಪ್ನ್ಯೂಮೊ ವೈರಸ್ ಈ ಬಾರಿ ಚೀನಾದಲ್ಲಿ ಕಾಣಿಸಿಕೊಂಡಿದ್ದು, ನೆರೆಯ ರಾಷ್ಟ್ರ ವೈರಸ್‌ನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೊಟೋಕಾಲ್‌ಗಳ ಮೊರೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚೀನಾ ದೇಶದಲ್ಲಿ ಎಚ್‌ಎಂಪಿವಿಯ ವೈರಾಣು ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವಿಶೇಷವಾಗಿ ಉತ್ತರ ಪ್ರಾಂತ್ಯದಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಅತೀ ಹೆಚ್ಚಾಗಿ ಬಾಧಿಸುತ್ತಿದೆ.
ಇನ್ನು ಚೀನಾದಲ್ಲಿ ಕೋವಿಡ್ ಮಾದರಿಯ ಸ್ಥಿತಿ ಎದುರಾಗದಂತೆ ತಡೆಗಟ್ಟಲು ಚೀನಾ ಸರ್ಕಾರ ಹೆಚ್ಚಿನ ಕ್ರಮ ಕೈಗೊಂಡಿದ್ದು, ಜನತೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ರಾಯಿಟರ್ಸ್ ವರದಿ ಪ್ರಕಾರ, ಚೀನಾದಲ್ಲಿ ಎಚ್‌ಎಂಪಿವಿ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ರೈನೋವೈರಸ್‌ನಂತಹ ಇತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಅಪಾಯದಲ್ಲಿದೆ ಎಂದು ಹೇಳಿದ್ದು, ಜನತೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.
ಈ ವೈರಸ್ ಎಲ್ಲಾ ವಯಸ್ಸಿನ ಜನರಲ್ಲಿ ಉಸಿರಾಟದ ಕಾಯಿಲೆಗಳನ್ನು ಉಂಟು ಮಾಡಬಹುದು. ಚಿಕ್ಕಮಕ್ಕಳು, ಹಿರಿಯ ವಯಸ್ಕರು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು ಈ ರೋಗಕ್ಕೆ ಬೇಗ ಗುರಿಯಾಗುತ್ತಾರೆ. ಈ ವೈರಸನ್ನು ಮೊದಲಿಗೆ 2001ರಲ್ಲಿ ಪತ್ತೆ ಮಾಡಲಾಗಿತ್ತು.
ಇನ್ನು ಚೀನಾದಲ್ಲಿ ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಉಸಿರಾಟದ ತೊಂದರೆ ಇರುವವರು ನಿರ್ಲಕ್ಷ್ಯ ಮಾಡದೇ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆ ನಡೆಸಿದ ಬಳಿಕ ಒಂದು ವೇಳೆ ಅವರಿಗೆ ಸೋಂಕು ಹರಡಿದೆ ಎಂದು ದೃಢವಾದರೆ, ಆ ವ್ಯಕ್ತಿಗಳನ್ನು ಪ್ರತ್ಯೇಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಯಾರೂ ಕೂಡ ಹೆದರುವ ಅವಶ್ಯಕತೆಯಿಲ್ಲ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲೆಂದರಲ್ಲಿ ಗುಂಪುಗೂಡಬಾರದು. ಆಗಾಗ್ಗೆ ಸ್ಯಾನಿಟೈಸರ್ ಬಳಸಬೇಕು ಎಂದು ಅಲ್ಲಿನ ಆರೋಗ್ಯ ಇಲಾಖೆ ಸೂಚನೆ ನೀಡಿದೆ.





