ನವದೆಹಲಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮ ಮತ್ತು ಯುಜಿಸಿ-ನೆಟ್ ಪರೀಕ್ಷೆ ರದ್ದು ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿರು.
ಪ್ರಧಾನಿ ಮೋದಿ ಜಿ ಉಕ್ರೇನ್-ರಷ್ಯಾ ಮತ್ತು ಇಸ್ರೇಲ್-ಗಾಜಾ ಯುದ್ಧವನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತಿದೆ. ಆದರೆ ಅವರಿಂದ ಭಾರತದಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಸಾಧ್ಯವಾಗಿಲ್ಲ ಅಥವಾ ನಿಲ್ಲಿಸಲು ಬಯಸುವುದಿಲ್ಲ ಎಂದು ರಾಹುಲ್ ಇಂದು(ಜೂ.20) ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
ಭಾರತದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಶಪಡಿಸಿಕೊಳ್ಳುತ್ತಿದ್ದು, ಇದನ್ನು ಬದಲಾಯಿಸದ ಹೊರತು ಪ್ರಶ್ನೆ ಪತ್ರಿಕೆ ಸೋರಿಕೆ ನಿಲ್ಲುವುದಿಲ್ಲ ಎಂದು ಪ್ರತಿಪಾದಿಸಿದರು.
ನಿರಂಕುಶವಾಗಿ ಏನನ್ನೂ ಮಾಡಬಾರದು. ಪ್ರತಿ ಪತ್ರಿಕೆಗೂ ಒಂದೇ ನಿಯಮ ಇರಬೇಕು. ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ಪ್ರತಿಪಕ್ಷಗಳ ಸಂಸತ್ತಿನಲ್ಲಿ ಪ್ರಸ್ತಾಪಿಸಲಿವೆ ಎಂದರು.
ಪ್ರಸ್ತುತ ಲೋಕಸಭಾ ಚುನಾವಣೆಯ ನಂತರ ಮೋದಿ ಅವರು ಮಾನಸಿಕವಾಗಿ ಕುಸಿದಿದ್ದಾರೆ. ಹೀಗಾಗಿ ಸರ್ಕಾರ ನಡೆಸಲು ಹೆಣಗಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.