ಹೊಸದಿಲ್ಲಿ : ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಭಾರತವು ಸಾಧ್ಯವಿರುವ ಎಲ್ಲ ನೆರವು ನೀಡಲು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿಗೆ ಭರವಸೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆ ನಿಗದಿ ಬೆನ್ನಲ್ಲೇ, ಉಭಯ ದೇಶಗಳ ನಾಯಕರು ಫೋನ್ ಸಂಭಾಷಣೆ ಮೂಲಕ ಮಾತುಕತೆ ನಡೆಸಿದ್ದಾರೆ.
ಸಂಘರ್ಷಕ್ಕೆ ಶೀಘ್ರ ಮತ್ತು ಶಾಂತಿಯುತ ಪರಿಹಾರದ ಅಗತ್ಯತೆಯ ಬಗ್ಗೆ ಸ್ಥಿರ ನಿಲುವನ್ನು ಭಾರತ ಸದಾ ಬೆಂಬಲಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಈ ವಿಷಯದಲ್ಲಿ ಭಾರತವು ಸಾಧ್ಯವಿರುವ ಎಲ್ಲ ನೆರವು ನೀಡಲು ಮತ್ತು ಉಕ್ರೇನ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಬದ್ಧವಾಗಿದೆ ಎಂದು ಮೋದಿ ಅವರು ತಿಳಿಸಿದ್ದಾರೆ.
ದ್ವಿಪಕ್ಷೀಯ ಸಹಕಾರ ಸೇರಿದಂತೆ ಸಮಗ್ರ ರಾಜತಾಂತ್ರಿಕ ಸ್ಥಿತಿಗತಿ ಚರ್ಚಿಸಿದ್ದೇವೆ. ದೇಶದ ಜನರಿಗೆ ಮೋದಿ ಅವರ ಬೆಂಬಲದ ಮಾತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.





