ನವದೆಹಲಿ: ಬಿಜೆಪಿಯಲ್ಲಿನ ಭಿನ್ನಮತ, ಒಳಜಗಳ ಹಾದಿ ಬೀದಿ ರಂಪಾಟವಾಗಿ ಮಾರ್ಪಟ್ಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಿ.ವೈ.ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ವಿಜಯೇಂದ್ರ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ನಡೆಸುತ್ತಿದ್ದಾರೆ. ಅವರ ಬಂಡವಾಳ ಏನೆಂಬುದು ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ತಿಳಿದಿದೆ. ನಕಲಿ ಸಹಿ ಮಾಡಿ ಭ್ರಷ್ಟಾಚಾರ ನಡೆಸಿದ್ದಾರೆ. ನಮ್ಮದು ಹಿಂದುತ್ವದ ಪರ, ವಂಶವಾದದ ವಿರುದ್ಧದ ಹೋರಾಟ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ವಿಜಯೇಂದ್ರ ಪರ ಮಾತನಾಡಲು ಯಾರೂ ಇಲ್ಲ. ನಾವು ಬರೀ ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡುತ್ತೇವೆ. ಕುಟುಂಬ ರಾಜಕಾರಣ ನಮಗೆ ಮುಖ್ಯವಲ್ಲ ಎಂದರು.
ಈ ಮೂಲಕ ಶಾಸಕ ಯತ್ನಾಳ್ ಅವರು ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲೇಬೇಕು ಎಂದು ಪಣ ತೊಟ್ಟಿದ್ದು, ಆಪ್ತರ ಜೊತೆ ಸೇರಿಕೊಂಡು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.