ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದು, ಇಂದು ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಇದರೊಂದಿಗೆ ಭಾರತ ಆರ್ಥಿಕ ಶಿಲ್ಪಿಯ ಸುದೀರ್ಘ ಅಧ್ಯಾಯವೊಂದು ಕೊನೆಗೊಂಡಿದೆ.
ಮನಮೋಹನ್ ಸಿಂಗ್ ಅವರಿಗೆ ಸಕಲ ಸರ್ಕಾರಿ ಹಾಗೂ ದೇಶದ ಮೂರು ಸೇನಾಪಡೆಗಳ ಗೌರವಗಳೊಂದಿಗೆ
ಇಂದು(ಡಿಸೆಂಬರ್.28) ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಿತು. ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವ, ರಕ್ಷಣಾ ಸಚಿವ ಪುಷ್ಪ ನಮನ ಸಲ್ಲಿಸಿದರು. ಬಳಿಕ ರಾಷ್ಟ್ರಧ್ವಜವನ್ನು ಅವರ ಧರ್ಮಪತ್ನಿಗೆ ಹಸ್ತಾಂತರಿಸಲಾಯಿತು. ಅವರ ಪಾರ್ಥಿವ ಶರೀರಕ್ಕೆ ಅಂತ್ಯ ಸಂಸ್ಕಾರವನ್ನು ಸಿಖ್ ಸಂಪ್ರದಾಯದಂತೆ ವಿಧಿ-ವಿಧಾನ ಕಾರ್ಯಗಳನ್ನು ನೆರವೇರಿಸಲಾಯಿತು. ಈ ವೇಳೆ ಮನಮೋಹನ್ ಸಿಂಗ್‌ರವರ ಪಾರ್ಥಿವ ಶರೀರಕ್ಕೆ ಸಿಂಗ್ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದರು. ಬಳಿಕ ಸಿಂಗ್ ಅವರ ಮಗ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಅಂತ್ಯಕ್ರಿಯೆಯಲ್ಲಿ ಗಣ್ಯಾತಿಗಣ್ಯರು ಭಾಗಿ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಡಿಸೆಂಬರ್.26 ರಂದು ತಡರಾತ್ರಿ ನಿಧನರಾಗಿದ್ದು, ಇಂದು ಅಂತ್ಯ ಸಂಸ್ಕಾರ ನೆರವೇರಿದೆ. ಅವರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮೂರು ಸೇನಾ ಪಡೆಗಳ ಮುಖ್ಯಸ್ಥರು ಭೂತಾನ್ ದೊರೆ ಜಿಗ್ಮ್ ಖೇಸರ್ ನಮ್ಗೇಲ್ ವಾಂಗ್‌ಚುಕ್ ಹಾಗೂ ಪತ್ನಿ ರಾಣಿ ಜೆಟ್ಸುನ್ ಪೆಮಾ ವಾಂಗ್‌ಚುಕ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.