ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ವಿಚಾರವಾಗಿ ಸರ್ವಪಕ್ಷ ಸಭೆಗೆ ಹಾಜರಾಗದೇ ಪ್ರಧಾನಿ ಮೋದಿ ಅವರು ಚುನಾವಣಾ ಭಾಷಣ ಮಾಡಲು ಬಿಹಾರಕ್ಕೆ ಹೋಗುತ್ತಾರೆ. ಅವರ ವರ್ತನೆ ಸರಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಪಹಲ್ಗಾಮ್ ವಿಚಾರವಾಗಿ ಪ್ರಧಾನಿ ಸರ್ವಪಕ್ಷ ಸಭೆ ಕರೆದಿದ್ದರು. ಸಭೆಗೆ ಲೋಕಸಭೆ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೆಲ್ಲರೂ ಭಾಗಿಯಾಗಿದ್ದೆವು. ಸರ್ಕಾರದ ವತಿಯಿಂದ ಪ್ರಧಾನಿಗಳು ಹಾಜರಾಗಬೇಕಿತ್ತು. ಆದರೆ ಅವರ ಹಾಜರಾತಿ ಇರಲಿಲ್ಲ. ಪ್ರಧಾನಿಗಳ ಈ ವರ್ತನೆ ಸರಿಯಿಲ್ಲ ಎಂದು ಕಿಡಿಕಾರಿದರು.
ಇನ್ನು ಸ್ವತಃ ಕೇಂದ್ರ ಸರ್ಕಾರವೇ ಭದ್ರತಾ ವೈಫಲ್ಯವಾಗಿದೆ ಎಂದು ಒಪ್ಪಿಕೊಂಡಿದೆ. ಆ ಕಾರಣಕ್ಕಾಗಿ ಸರ್ವಪಕ್ಷ ಸಭೆ ಕರೆದಿದ್ದೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಘಟನೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದೇವೆ ಎಂದರು.





