ಅಹಮದಾಬಾದ್: ಕೇಂದ್ರ ಸರ್ಕಾರ ಇಡೀ ದೇಶವನ್ನು ಮಾರಿ ಹೊರ ನಡೆಯುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಹಮದಾಬಾದ್‍ನಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಉದ್ಯೋಗಗಳಲ್ಲಿ ಎಸ್‍ಸಿ, ಎಸ್‍ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮೋದಿಜೀ ಇಡೀ ದೇಶವನ್ನು ಮಾರಿ ದೇಶ ತೊರೆದು ಹೋಗುತ್ತಾರೆ ಎಂದು ಕಿಡಿಕಾರಿದರು.
ವಿಮಾನ ನಿಲ್ದಾಣಗಳು, ಬಂದರುಗಳು, ಗಣಿಗಾರಿಕೆ, ಮಾಧ್ಯಮ ಎಲ್ಲವನ್ನೂ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಸ್ತಾಂತರಿಸಲಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದೆ. ನಿರುದ್ಯೋಗದಿಂದ ಪಾರಾಗಲು ಶ್ರೀಮಂತರು ಮತ್ತು ಯುವಕರು ದೇಶ ತೊರೆಯುತ್ತಿದ್ದಾರೆ. ಶ್ರೀಮಂತರು ವಿದೇಶದಲ್ಲಿ ನೆಲೆಸುತ್ತಿದ್ದಾರೆ. ನಿರುದ್ಯೋಗದಿಂದ ಪಾರಾಗಲು ವಿದೇಶಕ್ಕೆ ಹೋದ ಯುವಕರನ್ನು ಸರಪಳಿಯಲ್ಲಿ ಬಂಧಿಸಿ ವಾಪಸ್ ಕಳುಹಿಸಲಾಗುತ್ತಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷವು 2014ರ ನಂತರವೇ ಭಾರತದ ಅಭಿವೃದ್ಧಿ ಪ್ರಾರಂಭವಾಯಿತು ಎಂದು ಪದೇ ಪದೇ ಹೇಳಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಚುನಾವಣಾ ಆಯೋಗ (ಇಸಿ) ಸೇರಿದಂತೆ ಯಾವುದೇ ಸಂಸ್ಥೆಯೂ ಪ್ರಧಾನಿಯಡಿ ಸುರಕ್ಷಿತವಾಗಿಲ್ಲ ಎಂದರು.
ವಿರೋಧ ಪಕ್ಷಗಳನ್ನು ಸೋಲಿಸಲು ಸಂಪೂರ್ಣ ಇವಿಎಂ ವ್ಯವಸ್ಥೆಯನ್ನು ಬಿಜೆಪಿ ವಿನ್ಯಾಸಗೊಳಿಸಿದೆ. ಚುನಾವಣಾ ವಂಚನೆ ನಡೆಯುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಬ್ಯಾಲೆಟ್ ಪೇಪರ್‍ಗಳಿಗೆ ಮರಳಿವೆ, ಆದರೆ ನಾವು ಮಾತ್ರ ಇವಿಎಂಗಳನ್ನು ಬಳಸುತ್ತಿದ್ದೇವೆ ಎಂದು ಕಿಡಿಕಾರಿದರು.





