ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು ರಕ್ಷಿಸಲು ಹಾಗೂ ಪೆಟ್ರೋಲಿಯಂ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಲಭ್ಯತೆ, ಪೂರೈಕೆ ಹಾಗೂ ಸಮಾನ ಹಂಚಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಮಂಗಳವಾರ 1955ರ ಅಗತ್ಯ ಸರಕು ಕಾಯ್ದೆ(ಇಸಿ ಕಾಯ್ದೆ)ಯನ್ನು ಜಾರಿಗೆ ತಂದಿದೆ.
ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ದೇಶಾದ್ಯಂತ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಂಸ್ಕರಣಾಗಾರಗಳು ಮತ್ತು ಪೆಟ್ರೋಕೆಮಿಕಲ್ ಘಟಕಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌ಪಿಜಿ) ಉತ್ಪಾದನೆಯನ್ನು ಗರಿಷ್ಟಗೊಳಿಸಲು ಮತ್ತು ಪ್ರಮುಖ ಹೈಡ್ರೋಕಾರ್ಬನ್ ಹೊಳೆಗಳನ್ನು ಎಲ್‌ಪಿಜಿ ಪೂಲ್‌ಗೆ ತಿರುಗಿಸಲು ಸರ್ಕಾರ ಆದೇಶ ನೀಡಿದೆ.
ಭಾರತವು ಸುಮಾರು 332 ಮಿಲಿಯನ್ ಎಲ್‌ಪಿಜಿ ಗ್ರಾಹಕರನ್ನು ಹೊಂದಿದ್ದು, ನಿರಂತರ ಗ್ರಾಹಕರಿಗೆ ತನ್ನ ಅಗತ್ಯತೆಯನ್ನು ಪೂರೈಸಲು ಕೇಂದ್ರ ಸರ್ಕಾರ 1955ರ ಅಗತ್ಯ ಸರಕುಗಳ ಕಾಯ್ದೆಯನ್ನು ಜಾರಿಗೆ ತಂದಿದೆ.
1955 ರ ಅಗತ್ಯ ಸರಕುಗಳ ಕಾಯ್ದೆ ಎಂದರೇನು?
1955ರ ಅಗತ್ಯ ಸರಕುಗಳ ಕಾಯ್ದೆ ಎನ್ನುವುದು, ಜನಸಾಮಾನ್ಯರ ದೈನಂದಿನ ಜೀವನಕ್ಕೆ ಅತ್ಯಗತ್ಯವಾದ ವಸ್ತುಗಳು ಸರಿಯಾದ ಬೆಲೆಗೆ ಮತ್ತು ಸುಗಮವಾಗಿ ಸಿಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರಕ್ಕಿರುವ ಒಂದು ಬಲಿಷ್ಠ ಕಾನೂನು ಅಸ್ತ್ರವಾಗಿದೆ. ಜೊತೆಗ ಅಕ್ರಮ ದಾಸ್ತಾನು ತಡೆ, ಬೆಲೆ ನಿಯಂತ್ರಣ ಹಾಗೂ ಆದ್ಯತೆಯ ಹಂಚಿಕೆ ಮುಖ್ಯ ಉದ್ದೇಶವಾಗಿದೆ.
ಈ ಹೊಸ ಆದೇಶದಡಿಯಲ್ಲಿ, ಮನೆಗಳಿಗೆ ದೇಶೀಯ ಪೈಪ್ಡ್ ಅನಿಲ ಮತ್ತು ವಾಹನಗಳಿಗೆ ಸಿಎನ್‌ಜಿಯ ಶೇ.100 ರಷ್ಟು ಖಚಿತ ಪೂರೈಕೆ ಮಾಡಲಾಗುವುದು ಎಂದು ಹೇಳಿದೆ. ಆದೇಶದ ಪ್ರಕಾರ, ದೇಶೀಯ ಪೈಪ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ, ಸಾರಿಗೆಗಾಗಿ ಸಂಕುಚಿತ ನೈಸರ್ಗಿಕ ಅನಿಲ, ಎಲ್‌ಪಿಜಿ ಉತ್ಪಾದನೆ, ಪೈಪ್‌ಲೈನ್ ಕಂಪ್ರೆಸರ್ ಇಂಧನ ಅವಶ್ಯಕತೆಗಳು, ರಸಗೊಬ್ಬರ ಸ್ಥಾವರಗಳು, ಚಹ ಕೈಗಾರಿಕೆಗಳು ಮತ್ತು ಇತರ ಪ್ರಮುಖ ಕೈಗಾರಿಕಾ ಗ್ರಾಹಕರಂತಹ ವಲಯಗಳಿಗೆ ಆದ್ಯತೆಯ ಹಂಚಿಕೆಯನ್ನು ನೀಡಲಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಚಹ ಉದ್ಯಮ, ಉತ್ಪಾದನಾ ಘಟಕಗಳು ಮತ್ತು ನೈಸರ್ಗಿಕ ಅನಿಲ ಗ್ರಿಡ್ ಮೂಲಕ ಸಂಪರ್ಕ ಹೊಂದಿದ ಕೈಗಾರಿಕಾ ಗ್ರಾಹಕರು ತಮ್ಮ ಸರಾಸರಿ ಪೂರೈಕೆಯ ಶೇ.80 ಅನ್ನು ಪಡೆಯುತ್ತಾರೆ. ಅದೇ ರೀತಿ, ಕೈಗಾರಿಕಾ ಮತ್ತು ವಾಣಿಜ್ಯ ನೈಸರ್ಗಿಕ ಅನಿಲ ಗ್ರಾಹಕರನ್ನು ಸಹ ಅವರ ಹಿಂದಿನ ಆರು ತಿಂಗಳ ಸರಾಸರಿಯ ಶೇ.80 ಕ್ಕೆ ಮಿತಿಗೊಳಿಸಲಾಗಿದೆ.
25 ದಿನದ ಬಳಿಕವೇ ಮತ್ತೊಂದು ಸಿಲಿಂಡರ್
ಒಂದು ಸಿಲಿಂಡರ್ ಬುಕಿಂಗ್ ಮಾಡಿದ 25 ದಿನಗಳ ನಂತರವಷ್ಟೇ ಮತ್ತೊಂದು ಬುಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಬಿಕ್ಕಟ್ಟಿಗೆ ಮುನ್ನ ಸಿಲಿಂಡರ್ ಬುಕಿಂಗ್ ಅಂತರ 15 ದಿನಗಳಷ್ಟಿತ್ತು. 2 ದಿನಗಳ ಹಿಂದೆ ಇದನ್ನು 21 ದಿನಗಳಿಗೆ ಹೆಚ್ಚಿಸಲಾಗಿತ್ತು. ಈಗ ಮತ್ತಷ್ಟು ದಿನ ಹೆಚ್ಚು ಕಾಯಬೇಕಿದೆ. ಕಾಳಸಂತೆಯಲ್ಲಿ ಸಿಲಿಂಡರ್ ಹಾಗೂ ಅನಗತ್ಯ ಸಂಗ್ರಹ ತಡೆಗೆ ಸರ್ಕಾರ ಈ ಕ್ರಮಕೈಗೊಂಡಿದೆ.
ದಾಖಲೆ ಮಟ್ಟಕ್ಕೆ ಕಚ್ಚಾತೈಲ
ಮಧ್ಯಪ್ರಾಚ್ಯ ಸಂಘರ್ಷವು ಭಾರತಕ್ಕೆ ಇಬ್ಬಗೆಯ ಸಂಕಟ ತಂದೊಡ್ಡಿದೆ. ಒಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 2022ರ ಬಳಿಕ ಇದೇ ಮೊದಲ ಬಾರಿಗೆ ದಾಖಲೆ ಮಟ್ಟಕ್ಕೆ ಜಿಗಿದಿದೆ. ಸೋಮವಾರ ಬ್ಯಾರಲ್‌ಗೆ 120 ಡಾಲರ್‌ವರೆಗೂ ಜಿಗಿದಿದ್ದ ಕಚ್ಚಾತೈಲ ದರ ಬಳಿಕ 106 ಡಾಲರ್ ತಲುಪಿದೆ. ಆದರೂ ಶೇ. 14 ಏರಿಕೆ ಕಂಡಿದೆ. ಇದು ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಒತ್ತಡ ಸೃಷ್ಟಿಸಿದೆ. ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಅಡುಗೆ ಅನಿಲದ ಬಿಸಿ ಈಗಾಗಲೇ ಗ್ರಾಹಕರಿಗೆ ತಟ್ಟಿದೆ.





