ಕೇರಳ: ಇಲ್ಲಿನ ಜವಾಹರ್‌ಲಾಲ್ ನೆಹರು ಅಂತರಾಷ್ಟ್ರೀಯ ಕ್ರೀಡಾಂಗಣದ ವಿಐಪಿ ಗ್ಯಾಲರಿಯಿಂದ 20 ಅಡಿ ಕೆಳಗೆ ಬಿದ್ದು ಕೇರಳದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಸ್ಥಿತಿ ಗಂಭೀರವಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಉಮಾ ಥಾಮಸ್ ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವೈದ್ಯರ ಮಾಹಿತಿ ಪ್ರಕಾರ ಘಟನೆಯಲ್ಲಿ ಶಾಸಕಿ ಉಮಾ ಥಾಮಸ್ ಅವರ ಮೆದುಳು, ಶ್ವಾಸಕೋಶಗಳು ಹಾಗೂ ಬೆನ್ನುಮೂಳೆಗೆ ತೀವ್ರ ಗಾಯವಾಗಿದೆ. ಅವರ ಪಕ್ಕೆಲುಬು ಮುರಿದುಹೋದ ಪರಿಣಾಮ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆಯ ವಿವರ: ಭಾನುವಾರ ಕಲೂರ್ ಕ್ರೀಡಾಂಗಣದಲ್ಲಿ ನಟಿ ದಿವ್ಯಾ ಉನ್ನಿ ನೇತೃತ್ವದ 12,000 ನೃತ್ಯಗಾರರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ತೃಕ್ಕಾಕರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಥಾಮಸ್ ಅವರು ಕಾಲು ಜಾರಿ 20 ಅಡಿ ಕೆಳಗೆ ಬಿದ್ದಿದ್ದು, ಘಟನೆ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಉಮಾ ಥಾಮಸ್ ಅವರು ಕೆಳಗೆ ಬಿದ್ದಾಗ ಅವರ ಮೇಲೆ ಪೈಪ್ ಕೂಡ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.