ನವದೆಹಲಿ: ಮೈಸೂರಿನ ಸಂಸ್ಥೆಯಾಗಿರುವ “ಕಲಿಸು” ಫೌಂಡೇಶನ್ ಮಕ್ಕಳಿಗೆ ಹಾಗೂ ಯುವ ಸಮೂಹಕ್ಕೆ ಜ್ಞಾನಾರ್ಜನೆ ಮಾಡಲು ಮುಂದಾಗಿ, ನವದೆಹಲಿಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ “ಕಲಿಸು” ಫೌಂಡೇಶನ್ನ 125ನೇ ಗ್ರಂಥಾಲಯಕ್ಕೆ ಶುಕ್ರವಾರ ಚಾಲನೆ ನೀಡಿ ಯದುವೀರ ಒಡೆಯರ್ ಮಾತನಾಡಿದರು.
ಕಲಿಸು ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಜ್ಞಾನ ಹರಡುವ ಯಜ್ಞದಲ್ಲಿ ತೊಡಗಿದೆ. ಈ ಮಹತ್ಕಾರ್ಯದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಈ ಸಂಸ್ಥೆಯ ರಾಯಭಾರಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲಾಗುತ್ತಿದೆ. ನಿಜಕ್ಕೂ ಇದೊಂದು ಪುಣ್ಯದ ಕೆಲಸ ಎಂದು ತಿಳಿಸಿದ್ದಾರೆ.
ವ್ಯಾಪ್ತಿ ವಿಸ್ತರಿಸಿದ ಕಲಿಸು:
ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ (ಲೈಬ್ರರಿ) ಆರಂಭಿಸುವ ಮೂಲಕ ನಮ್ಮ ಮೈಸೂರಿನ “ಕಲಿಸು” ಫೌಂಡೇಷನ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಲೈಬ್ರರಿ ಆರಂಭಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸಂಸ್ಥಾಪಕರಾದ ನಿಖಿಲೇಶ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಯದುವೀರ್ ತಿಳಿಸಿದರು.
ಕಲಿಸು ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಿದ್ಧ: ಬಾನ್ಸುರಿ
ನವದೆಹಲಿಯ ಸಂಸದೆಯಾಗಿರುವ ಬಾನ್ಸುರಿ ಸ್ವರಾಜ್ ಮಾತನಾಡಿ, ಮಕ್ಕಳಿಗಾಗಿ ಲೈಬ್ರರಿ ಆರಂಭಿಸಿರುವ ಮೈಸೂರು ಮೂಲದ ಕಲಿಸು ಸಂಸ್ಥೆಗೆ ನನ್ನ ಶುಭ ಹಾರೈಕೆಗಳು ಎಂದರು.
“ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಾವು “ಕಲಿಸು” ಸಂಸ್ಥೆ ಒಟ್ಟಾಗಿ ಕೈ ಜೋಡಿಸಲು ಉತ್ಸುಕರಾಗಿದ್ದೇವೆ. ಮತ್ತು ಶೀಘ್ರದಲ್ಲೇ “ಕಲಿಸು” ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗುತ್ತೇವೆ ಎಂದು ತಿಳಿಸಿದರು.
ನಂತರ ಯದುವೀರ್ ಒಡೆಯರ್ ಹಾಗೂ ಬಾನ್ಸುರಿ ಸ್ವರಾಜ್ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಭವಿಷ್ಯದ ಯೋಜನೆಗಳು, ಹವ್ಯಾಸ, ಮುಂದಿನ ಗುರಿ ಹಾಗೂ ಇಷ್ಟದ ವಿಷಯ ಹಾಗೂ ಕ್ರೀಡೆ ಬಗ್ಗೆ ಚರ್ಚಿಸಿದರು.
“ಕಲಿಸು” ಫೌಂಡೇಶನ್ ಸಂಸ್ಥಾಪಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಖಿಲೇಶ್ ಇದೇ ಸಂದರ್ಭದಲ್ಲಿ ಮಾತನಾಡಿ, ಗ್ರಂಥಾಲಯಗಳನ್ನು ಆರಂಭಿಸುವ ಅಭಿಯಾನದ ಕುರಿತು ವಿವರಿಸಿದರು.
125ನೇ ಲೈಬ್ರರಿ, 2.5 ಲಕ್ಷ, ಪುಸ್ತಕ, 25 ಸಾವಿರ ವಿದ್ಯಾರ್ಥಿಗಳಿಗೆ ನೆರವು
ಕಲಿಸು ಸಂಸ್ಥೆ ಈಗ ಎರಡನೇ ದಶಕಕ್ಕೆ ಕಾಲಿಟ್ಟಿದೆ. ಕಳೆದ ಹಲವಾರು ವರ್ಷಗಳಿಂದ ನಿರಂತರ ವಿದ್ಯಾದಾನದಲ್ಲಿ ತೊಡಗಿಕೊಂಡಿರುವ ಸಂಸ್ಥೆಯ 125ನೇ ಲೈಬ್ರರಿ ಈಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ತಲೆ ಎತ್ತಿದೆ.





