Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಕಕ್ಕಡ್‌ ಹೇಳಿಕೆ ಮಾನಹಾನಿಕರ ಮಾತ್ರವಲ್ಲ ಕೋಮು ಪ್ರಚೋದನಕಾರಿ: ಬಾಂಬೆ ಹೈಕೋರ್ಟ್‌ಗೆ ಸಲ್ಮಾನ್ ಖಾನ್

ಮುಂಬೈ: ನೆರೆಯ ವ್ಯಕ್ತಿಯಾದ ಕೇತನ್‌ ಕಕ್ಕಡ್‌ ತಮ್ಮ ವಿರುದ್ಧ ಅಂತರ್ಜಾಲದಲ್ಲಿ ನೀಡಿರುವ ಹೇಳಿಕೆ ಮಾನಹಾನಿಕರ ಮಾತ್ರವಲ್ಲ ಕೋಮು ಪ್ರಚೋದನಕಾರಿ ಎಂದು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ತಮ್ಮ ವಿರುದ್ಧದ ಹೇಳಿಕೆಗಳನ್ನು ಹೊಂದಿರುವ ಕಕ್ಕಡ್‌ ಅವರ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲು/ ಅಮಾನತುಗೊಳಿಸಲು ನಿರಾಕರಿಸಿದ ಸಿವಿಲ್ ನ್ಯಾಯಾಲಯವೊಂದರ ಮಧ್ಯಂತರ ಆದೇಶ ಪ್ರಶ್ನಿಸಿ ಸಲ್ಮಾನ್‌ ಖಾನ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ನಲ್ಲಿ, ಖಾನ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ರವಿ ಕದಂ, ಕಳೆದ ವಾರ ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ನಿರಾಕರಿಸಿರುವುದು ಸೂಕ್ತವಾಗಿಲ್ಲ ಎಂದರು.

ಪನ್ವೇಲ್‌ನಲ್ಲಿರುವ ಸಲ್ಮಾನ್‌ ಖಾನ್‌ ಅವರ ಫಾರ್ಮ್‌ಹೌಸ್‌ನ ಪಕ್ಕದಲ್ಲಿ ಕಕ್ಕಡ್ ಭೂಮಿ ಖರೀದಿಸಲು ಯತ್ನಿಸಿದ್ದರು. ಆದರೆ ಆ ವ್ಯವಹಾರವನ್ನು ಅಧಿಕಾರಿಗಳು ಕಾನೂನುಬಾಹಿರವೆಂದು ಪರಿಗಣಿಸಿ ರದ್ದುಗೊಳಿಸಿದ್ದರು. ಬಳಿಕ ಖಾನ್ ಮತ್ತು ಅವರ ಕುಟುಂಬ ಸದಸ್ಯರ ಆಜ್ಞೆಯ ಮೇರೆಗೆ ವ್ಯವಹಾರ ರದ್ದುಗೊಳಿಸಲಾಗಿದೆ ಎಂದು ಕಕ್ಕಡ್ ಸುಳ್ಳು ಮತ್ತು ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ದೂರಲಾಗಿದೆ.

ಕಕ್ಕಡ್‌ ಅಪ್‌ಲೋಡ್ ಮಾಡಿರುವ ವೀಡಿಯೊಗಳು ಊಹಾಪೋಹದಿಂದ ಕೂಡಿವೆ. ಅವು ಮಾನಹಾನಿಕರ ಮಾತ್ರವಲ್ಲದೆ ಸಲ್ಮಾನ್ ಖಾನ್ ವಿರುದ್ಧ ಕೋಮುಪ್ರಚೋದನೆ ಉಂಟು ಮಾಡುತ್ತವೆ. ವೀಡಿಯೋದಲ್ಲಿ, ಸಲ್ಮಾನ್ ಖಾನ್ ಅವರನ್ನು ಪ್ರತಿವಾದಿ ಕಕ್ಕಡ್ ಬಾಬರ್ ಮತ್ತು ಔರಂಗಜೇಬ್‌ಗೆ ಹೋಲಿಸಿದ್ದಾರೆ. ಅಯೋಧ್ಯೆ ಮಂದಿರ ನಿರ್ಮಿಸಲು 500 ವರ್ಷ ಹಿಡಿಯಿತು. ಇಲ್ಲಿ ಸಲ್ಮಾನ್ ಖಾನ್ ಗಣೇಶ ಮಂದಿರ ಮುಚ್ಚಲು ಯತ್ನಿಸಿದ್ದಾರೆ ಎಂದು ಕಕ್ಕಡ್‌ ಆರೋಪಿಸಿದ್ದಾರೆ. ಖಾನ್‌ ವಿರುದ್ಧ ಕಾಮೆಂಟ್‌ ಮಾಡಲು ಅವಕಾಶವಿರುವ ಲಕ್ಷಾಂತರ ವೀಕ್ಷಕರು ಈ ವೀಡಿಯೊಗಳನ್ನು ನೋಡುತ್ತಿದ್ದಾರೆ. ವೀಡಿಯೊಗಳು ಎಲ್ಲವನ್ನೂ ಕೋಮುವಾದಗೊಳಿಸಿವೆ. ಹಿಂದೂಗಳ ವಿರುದ್ಧ ಮುಸ್ಲಿಮರು ಎಂದು ಬಿಂಬಿಸಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿ ಸಿ ವಿ ಭಾಡಂಗ್ ಅವರು ಮಾನಹಾನಿಕರವೆಂದು ಆರೋಪಿಸಲಾದ ವೀಡಿಯೊಗಳ ಎಲ್ಲಾ ಪ್ರತಿಲೇಖನ (ಟ್ರಾನ್ಸ್‌ಕ್ರಿಪ್ಟ್‌) ಸಲ್ಲಿಸಲು ಸಲ್ಮಾನ್‌ ಖಾನ್‌ ಪರ ವಕೀಲ ಕದಂ ಅವರಿಗೆ ಸೂಚಿಸಿದರು. ಆಗಸ್ಟ್ 22ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ