Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

ಜಾಯ್‌ ಐಸ್‌ಕ್ರೀಮ್ ಭೂ ವಿವಾದ: 3.23 ಎಕರೆ ಭೂಮಿ ಪ್ರೆಸ್ಟೀಜ್‌ ಎಸ್ಟೇಟ್‌ಗೆ ಸೇರಿದೆ: ವಿಭಾಗೀಯ ಪೀಠದ ಸ್ಪಷ್ಟೋಕ್ತಿ

ಬೆಂಗಳೂರು: ಕೃಷ್ಣರಾಜಪುರ ಹೋಬಳಿಯ ಪಟ್ಟಂದೂರ ಅಗ್ರಹಾರದಲ್ಲಿನ 3.23 ಎಕರೆ ಭೂಮಿಯು ಪ್ರತಿಷ್ಠಿತ ಪ್ರೆಸ್ಟೀಜ್‌ ಎಸ್ಟೇಟ್‌ ಪ್ರಾಜೆಕ್ಟ್‌ ಲಿಮಿಟೆಡ್‌ಗೆ ಸೇರಿದೆ ಎಂದು ಆದೇಶ ಮಾಡಿದ್ದ‌ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವು ಎತ್ತಿ ಹಿಡಿದಿದೆ.

ರಾಜ್ಯ ಸರ್ಕಾರ ಮತ್ತು ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

“ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಒಂದೊಮ್ಮೆ ಭೂಮಿ ಹಂಚಿಕೆ ಮಾಡಿದ್ದರೆ ಕರ್ನಾಟಕ ಭೂಮಿ ಮಂಜೂರು ನಿಯಮಗಳ ಅಡಿ ಭೂಮಿ ಪರಭಾರೆ (ನಾನ್‌ ಏಲಿಯನೇಷನ್) ಮಾಡದಿರುವ ಷರತ್ತು ಅನ್ವಯಿಸುವುದಿಲ್ಲ” ಎಂದು ಪೀಠ ಹೇಳಿದೆ.

“ರಾಜ್ಯ ಸರ್ಕಾರದ ಅನುಮತಿ ಪಡೆದು ಕೆಐಎಡಿಬಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಹೀಗಾಗಿ, ಕೆಐಎಡಿಬಿ ನಿಯಮ 20(1)(ಸಿ)ಗೆ ವಿರುದ್ಧವಾಗಿ ಭೂಮಿ ಹಂಚಿಕೆ ಮಾಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು” ಎಂದು ನ್ಯಾಯಾಲಯ ಹೇಳಿದೆ ಹೇಳಿದೆ.

“ಕೆಐಎಡಿಬಿಗೆ ಭೂಮಿ ಹಂಚಿಕೆ ಮಾಡಿರುವುದಕ್ಕೆ ಭೂಮಿ ಪರಭಾರೆ ಷರತ್ತು ಅನ್ವಯಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಲಿ ಪ್ರಕರಣದಲ್ಲಿ ಕರ್ನಾಟಕ ಸರ್ಕಾರವು ಕೆಐಎಡಿಬಿಗೆ ಭೂಮಿ ಹಂಚಿಕೆ ಮಾಡಿದೆ. ನಿಯಮದ 28(2) ಉಪಬಂಧದ ಅಡಿ ಭೂಮಿ ಪರಭಾರೆ ಷರತ್ತನ್ನು ಕರ್ನಾಟಕ ಸರ್ಕಾರವು ಸರಿಯಾಗಿ ಅನ್ವಯಿಸಿಲ್ಲ. ಹೀಗಾಗಿ, 2006 ಮಾರ್ಚ್‌ 31ರ ಮೆಮೊ ಮೂಲಕ ಜಿಲ್ಲಾಧಿಕಾರಿಯು ನಿಯಮ ಅನ್ವಯಿಸಬಾರದಿತ್ತು” ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಜಾಯ್‌ ಐಸ್‌ಕ್ರೀಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಭೂಮಿಯ ಮಾಲೀಕತ್ವ ಹೊಂದಿದ್ದು, ಅಲ್ಲಿ ಐಸ್‌ಕ್ರೀಮ್‌ ಉತ್ಪಾದನಾ ಫ್ಯಾಕ್ಟರಿ ನಡೆಸುತ್ತಿದೆ. 1989ರಲ್ಲಿ ಇದನ್ನು ಕೆಐಎಡಿಬಿಯು ಕೈಗಾರಿಕಾ ಪ್ರದೇಶ ಎಂದು ಘೋಷಿಸಿತ್ತು.

ಆಕ್ಷೇಪಾರ್ಹವಾದ ಭೂಮಿಯನ್ನು 1989ರಲ್ಲಿ ಜಾಯ್‌ ಐಸ್‌ಕ್ರೀಮ್ಸ್‌ಗೆ ಭೋಗ್ಯಕ್ಕೆ ಕೆಐಎಡಿಬಿ ನೀಡಿತ್ತು. 2006ರ ಮಾರ್ಚ್‌ 31ರಂದು ವಿಶೇಷ ಜಿಲ್ಲಾಧಿಕಾರಿಯು ಲಿಖಿತ ದಾಖಲೆಯ ಮೂಲಕ ಪರಭಾರೆ ಷರತ್ತು ವಿಧಿಸಿ ಭೂಮಿಯನ್ನು ಕೆಐಎಡಿಬಿಗೆ ವರ್ಗಾಯಿಸಿದ್ದರು.

ಜಾಯ್‌ ಐಸ್‌ಕ್ರೀಮ್ಸ್‌ ಕೋರಿಕೆಯ ಹಿನ್ನೆಲೆಯಲ್ಲಿ 2006ರ ಜುಲೈ 21ರಂದು ಕೆಐಎಡಿಬಿಯು ಜಾಯ್‌ ಐಸ್‌ಕ್ರೀಮ್ಸ್‌ಗೆ 5.30 ಕೋಟಿ ರೂಪಾಯಿಗೆ ಭೂಮಿ ಕ್ರಯ ಮಾಡಿಕೊಟ್ಟಿತ್ತು. 2006ರ ಆಗಸ್ಟ್‌ 30ರಂದು ಜಾಯ್‌ ಐಸ್‌ಕ್ರೀಮ್ಸ್‌ ಈ ಭೂಮಿಯನ್ನು ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರಾಜೆಕ್ಟ್ಸ್‌ಗೆ ಮಾರಾಟ ಮಾಡಿತ್ತು.

ಆನಂತರ, ಭೂಮಿ ಮಂಜೂರು ನಿಯಮಗಳನ್ನು ಜಾಯ್‌ ಐಸ್‌ಕ್ರೀಮ್ಸ್‌ ಉಲ್ಲಂಘಿಸಿದೆ ಎಂದು 2015ರ ಮೇ 23ರಂದು ಮಂಜೂರಾತಿ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿತ್ತು. ಕ್ರಯ ಪತ್ರ ಸೇರಿದಂತೆ ಎಲ್ಲಾ ವರ್ಗಾವಣೆಗಳನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರವು ಸಮರ್ಥನೀಯವಲ್ಲ ಎಂದು ಏಕಸದಸ್ಯ ಪೀಠ ಹೇಳಿತ್ತು. ಈಗ ಇದನ್ನು ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಎತ್ತಿ ಹಿಡಿದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ