Mysore
34
scattered clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಜಮ್ಮು ಕಾಶ್ಮೀರ : ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಲೋಕಾರ್ಪಣೆಗೆ ಸಿದ್ದ

ಜಮ್ಮು ಕಾಶ್ಮೀರ:  ಜಮ್ಮು ಕಾಶ್ಮೀರದ ಚೀನಾಬ್‌ ನದಿಯ ಮೇಲೆ ನಿರ್ಮಾಣವಾಗುತ್ತಿದ್ದ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಶುಭ ಗಳಿಗೆಯಲ್ಲಿ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಅದರೊಂದಿಗೆ, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಶ್ರೀನಗರಕ್ಕೆ ದೇಶದ ಇನ್ನಿತರ ಭಾಗದಿಂದ ರೈಲ್ವೆ ಸಂಪರ್ಕ ಕಲ್ಪಿಸುವ ಸನ್ನಿವೇಶ ಸನ್ನಿಹಿತವಾಗಿದೆ. ಹೀಗಾಗಿಯೇ ಇದು ದೇಶವನ್ನು ಜೋಡಿಸುವ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರೈಲ್ವೆ ಸೇತುವೆ ಎರಡು ಭಾಗಗಳು ಮಧ್ಯಭಾಗದಲ್ಲಿ ಸೇರುವ ಗೋಲ್ಡನ್‌ ಜಾಯಿಂಟ್‌ ಕಾಮಗಾರಿಯನ್ನು ಶನಿವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಇದರೊಂದಿಗೆ ಯೋಜನೆಯ ಶೇ. 98ರಷ್ಟು ಕಾಮಗಾರಿ ಪೂರ್ಣಗೊಂಡಂತೆ ಆಗಿದೆ. ಉಗ್ರರ ಸ್ಫೋಟದ ತೀವ್ರತೆಯನ್ನೂ ತಡೆದುಕೊಳ್ಳುವ ಶಕ್ತಿ ಹೊಂದಿರುವ ಈ ಕಬ್ಬಿಣದ ಸೇತುವೆ ಫ್ರಾನ್ಸ್‌ನ ಐಫೆಲ್‌ ಟವರ್‌ಗಿಂತ 35 ಮೀಟರ್‌ ಹೆಚ್ಚು ಎತ್ತರವಿದೆ. ಈವರೆಗೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಎಂಬ ಹೆಗ್ಗಳಿಕೆ ಗಳಿಸಿದ್ದ ಚೀನಾದ ಬೇಪಾನ್‌ಜಿಯಾಂಗ್‌ ನದಿಯ ಮೇಲಿನ ಉಕ್ಕಿನ ಸೇತುವೆಯನ್ನು (275 ಮೀಟರ್‌ ಎತ್ತರ) ಇದು ಹಿಂದಿಕ್ಕಿ ನಂ.1 ಎತ್ತರದ ಸೇತುವೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯದ್ಭುತ ಎಂಜಿನಿಯರಿಂಗ್‌ ಕೌಶಲದ ಪ್ರದರ್ಶನವೆಂದು ಹೇಳಲಾಗುವ ಈ ಸೇತುವೆಯು ನದಿಯ ನೀರಿನ ಮಟ್ಟದಿಂದ 359 ಮೀಟರ್‌ ಎತ್ತರವಿದೆ. 1.3 ಕಿ.ಮೀ. ಉದ್ದದ ಈ ಸೇತುವೆಯನ್ನು 2800 ಕೋಟಿ ರೂ. ವೆಚ್ಚದಲ್ಲಿ ಉತ್ತರ ರೈಲ್ವೆ ನಿರ್ಮಿಸಿದೆ. ಸೇತುವೆಯು ಎರಡು ಕಡೆಯಲ್ಲಿರುವ ಸಲಾಲ್‌ ಎ ಮತ್ತು ದುಗ್ಗಾ ರೈಲ್ವೆ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆಯ ಮೇಲೆ ರೈಲ್ವೆ ಸಂಚಾರ ಇನ್ನಷ್ಟೇ ಆರಂಭವಾಗಬೇಕಿದೆ.

ಉಧಮ್‌ಪುರ, ಶ್ರೀನಗರ, ಬಾರಾಮುಲ್ಲಾ ರೇಲ್‌ ಲಿಂಕ್‌ ಯೋಜನೆಯ ಅಂಗವಾಗಿ ಈ ಸೇತುವೆ ನಿರ್ಮಾಣಗೊಂಡಿದೆ. ಹಿಮಾಲಯದಲ್ಲಿ ಭಾರಿ ಪ್ರಮಾಣದ ಕಲ್ಲು ಬಂಡೆಗಳು ಹಾಗೂ ಮಣ್ಣನ್ನು ಅಗೆದು ರೇಲ್‌ ಲಿಂಕ್‌ ಯೋಜನೆ ಕೈಗೊಳ್ಳಲಾಗಿದೆ. ಆಫ್ಕಾನ್ಸ್‌ ಎಂಬ ನಿರ್ಮಾಣ ಕಂಪನಿ ಸೇತುವೆಯ ನಿರ್ಮಾಣದ ಗುತ್ತಿಗೆ ಪಡೆದಿತ್ತು. ತೀವ್ರತರ ಭೂಕಂಪನ ಹಾಗೂ ಹವಾಮಾನ ವೈಪರೀತ್ಯಗಳನ್ನೂ ತಡೆದುಕೊಳ್ಳುವ ಸಾಮರ್ಥ್ಯ ಈ ಸೇತುವೆಗಿದೆ ಎಂದು ನಿರ್ಮಾಣ ಕಂಪನಿಯ ಎಂಜಿನಿಯರ್‌ಗಳು ಹೇಳಿಕೊಂಡಿದ್ದಾರೆ.

ಗೋಲ್ಡನ್ ಜಾಯಿಂಟ್ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಸೇತುವೆಯ ಮೇಲೆ ಟ್ರ್ಯಾಕ್‌ಗಳನ್ನು ಹಾಕಲು ಎಂಜಿನಿಯರ್‌ಗಳಿಗೆ ದಾರಿ ಮಾಡಿಕೊಡಲಿದೆ. ಅದರ ಮೇಲಿನ ಟ್ರ್ಯಾಕ್‌ಗಳೊಂದಿಗೆ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಾಶ್ಮೀರವನ್ನು ರೈಲು ಜಾಲದ ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಈ ಸಂಬಂಧ ಹರ್ಷ ವ್ಯಕ್ತಪಡಿಸಿದ ಯುಎಸ್‌ಬಿಆರ್‌ಎಲ್ ಕೊಂಕಣ ರೈಲ್ವೇಸ್‌ನ ಮುಖ್ಯ ಆಡಳಿತಾಧಿಕಾರಿ ಸುರೇಂದರ್ ಮಾಹಿ, “ಇದು ನಮಗೆಲ್ಲರಿಗೂ ಬಹಳ ದೊಡ್ಡ ಯೋಜನೆಯಾಗಿದೆ. ಇಲ್ಲಿಗೆ ತಲುಪಲು ನಾವು ಸೇತುವೆಗಳು ಮತ್ತು ಸುರಂಗಗಳನ್ನು ಹೊಂದಿರುವ 26 ಕಿಮೀ ಅಪ್ರೋಚ್ ರಸ್ತೆಗಳನ್ನು ನಿರ್ಮಿಸಬೇಕಾಗಿತ್ತು. ಎಂಜಿನಿಯರ್‌ಗಳು ಹಲವಾರು ಸವಾಲುಗಳನ್ನು ಎದುರಿಸಿದರು. ಆದರೆ ಅಂತಿಮವಾಗಿ ಭಾರತದ ಜನರಿಗೆ ಎಂಜಿನಿಯರಿಂಗ್ ಅದ್ಭುತವನ್ನು ಉಡುಗೊರೆಯಾಗಿ ನೀಡಿದರು ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ